ಗೂಡಿನಬಳಿ ಅತ್ಯಾಚಾರ ಸಂತ್ರಸ್ತೆಗೆ ಸೂಕ್ತ ಪರಿಹಾರ ಕಲ್ಪಿಸಲು ಆಗ್ರಹ: ಎಸ್.ಡಿ.ಪಿ.ಐ.ಯಿಂದ ಜಿಲ್ಲಾಧಿಕಾರಿ ಭೇಟಿ

Update: 2018-09-22 06:26 GMT

ಮಂಗಳೂರು, ಸೆ.22: ಇತ್ತೀಚೆಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೂಡಿನಬಳಿ ಎಂಬಲ್ಲಿ 8 ವರ್ಷದ ಬಾಲಕಿಯ ಮೇಲೆ ದುಷ್ಕರ್ಮಿಗಳು ನಡೆಸಿರುವ ಅತ್ಯಾಚಾರ ಪ್ರಕರಣದ ಸಂತ್ರಸ್ತೆಗೆ  ಸೂಕ್ತ ಪರಿಹಾರ ಮತ್ತು ಕಾನೂನು ನೆರವು ಒದಗಿಸಬೇಕು ಎಂದು ಎಸ್.ಡಿ.ಪಿ.ಐ. ಒತ್ತಾಯಿಸಿದೆ.

 ಎಸ್.ಡಿ.ಪಿ.ಐ. ನಿಯೋಗವು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿತು.

ಮಹಿಳೆಯರು ಸಮಾಜದ ಎಲ್ಲಾ ರಂಗದಲ್ಲಿ ಮುಂದೆ ಬರುತ್ತಿರುವ ಈ ಕಾಲದಲ್ಲಿ, ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದರಲ್ಲೂ ಎಳೆ ವಯಸ್ಸಿನ ಹೆಣ್ಣುಮಕ್ಕಳು ಇಂತಹ ದುಷ್ಕರ್ಮಿಗಳ ದಾಳಿಗೆ ತುತ್ತಾಗುತ್ತಿರುವುದು ಬಹಳ ಖೇದಕರ ಎಂದು ಎಸ್.ಡಿ.ಪಿ.ಐ. ಕೃತ್ಯವನ್ನು ಖಂಡಿಸಿದೆ.

ನಿಯೋಗದಲ್ಲಿ ಎಸ್.ಡಿ.ಪಿ.ಐ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಜಿಲ್ಲಾ ಪ್ರ.ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್., ಕ್ಷೇತ್ರ ಸಮಿತಿಯ ಅಧ್ಯಕ್ಷ ಯುಸುಫ್ ಆಲಡ್ಕ, ಬಂಟ್ವಾಳ ಪುರಸಭಾ ಸಮಿತಿಯ ಅಧ್ಯಕ್ಷ ಮೂನೀಶ್ ಆಲಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ಡಿವಿಷನ್ ಅಧ್ಯಕ್ಷ ರಹಿಮಾನ್ ಗೂಡಿನಬಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News