ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಬೆಳ್ಳಿಹಬ್ಬ ಸಂಭ್ರಮಕ್ಕೆ ಚಾಲನೆ

Update: 2018-09-22 11:49 GMT

ಮಂಗಳೂರು, ಸೆ.22: ಮಂಜನಾಡಿಯ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಬೆಳ್ಳಿಹಬ್ಬ ಸಂಭ್ರಮಾಚರಣೆಗೆ ಇಂದು ಚಾಲನೆ ದೊರೆಯಿತು.

ನಗರದ ಪುರಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಸುನ್ನಿ ಜಮೀಯ್ಯತುಲ್ ಉಲಮಾದ ಅಧ್ಯಕ್ಷ ಹಾಗೂ ಖಾಝಿ ಶೈಖುನಾ ಅಲ್ಹಾಜ್ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ದುಆಗೈದರು.

ಸಮಾರಂಭವನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅಲ್ ಮದೀನಾ ಸಂಸ್ಥೆಯು ಕಳೆದ 25 ವರ್ಷಗಳಲ್ಲಿ ಮಂಜನಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಸೇವೆಯನ್ನು ಅದ್ಭುತವಾದ ರೀತಿಯಲ್ಲಿ ಮಾಡುತ್ತಿದೆ. ಇನ್ನೂ ಮುಂದೆಯೂ ಈ ರೀತಿಯ ಹೆಚ್ಚಿನ ಸೇವೆಯನ್ನು ಸಮಾಜಕ್ಕೆ ನೀಡಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಧಾರ್ಮಿಕ ವೌಲ್ಯಗಳನ್ನು ತಿಳಿಸುವ ಕಾರ್ಯ ಇಂದಿನ ಅಗತ್ಯವಾಗಿದೆ. ಇದರೊಂದಿಗೆ ಸೌಹಾರ್ದ ಮನೋಭಾವ ಮೂಡಿಸುವ ಕೆಲಸವೂ ಶಿಕ್ಷಣ ಸಂಸ್ಥೆಗಳಿಂದ ಆಗಬೇಕು ಎಂದರು.

ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಸಚಿವ ಡಾ.ಎ.ಎಂ.ಖಾನ್ ಮಾತನಾಡಿ, ಶಿಕ್ಷಣದೊಂದಿಗೆ ವೌಲ್ಯಗಳನ್ನು ಮರೆಯದೆ ಸಮುದಾಯಕ್ಕೆ ಹೆಸರು ತರುವ ಕೆಲಸವನ್ನು ಮಾಡುವಂತೆ ವಿದ್ಯಾರ್ಥಿಗಳಿಗೆ ಪೋತ್ಸಾಹಿಸಬೇಕಾಗಿದೆ ಎಂದರು.

 ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ ಮಾತನಾಡಿ, ಮುಸ್ಲಿಮ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿದ್ದ ಕಾಲದಲ್ಲಿ ಮಂಜನಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಆಂಭಿಸಿ ಅಬ್ಬಾಸ್ ಮುಸ್ಲಿಯಾರ್ ನೀಡಿರುವ ಸೇವೆ ಶ್ಲಾಘನೀಯ ಎಂದರು.

ಸನ್ಮಾನ: ಕಾರ್ಯಕ್ರಮದಲ್ಲಿ ಡಾ.ಎಂ.ಮೋಹನ್ ಆಳ್ವ ಹಾಗೂ ಡಾ.ಎ.ಎಂ.ಖಾನ್ ಅವರನ್ನು ಅಲ್ ಮದೀನಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

 * ಬೆಳ್ಳಿಹಬ್ಬದ ಲಾಂಛನವನ್ನು ಉದ್ಯಮಿ ಮನ್ಸೂರ್ ಅಹ್ಮದ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

* ಬೆಳ್ಳಿಹಬ್ಬದ ಯೋಜನೆಗಳ ಮಾಹಿತಿ ಪುಸ್ತಕವನ್ನು ಉಜಿರೆಯ ಸೈಯದ್ ಇಸ್ಮಾಯೀಲ್ ತಂಙಳ್ ಬಿಡುಗಡೆಗೊಳಿಸಿದರು.

 ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಅಧ್ಯಕ್ಷ ಶೈಖುನಾ ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ಬೆಳ್ಳಿಹಬ್ಬದ ಶುಭ ಸಂದೇಶ ಕೋರಿದರು.

ಸಮಾರಂಭದಲ್ಲಿ ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ, ಕಣಚೂರು ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಕಣಚೂರು ರಹ್ಮಾನ್, ದ.ಕ. ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಇದರ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಮುಡಾ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಉದ್ಯಮಿ ಮಜೀದ್ ಹಾಜಿ, ಅಬುಲ್ ಅಲಾ ಪುತ್ತಿಗೆ, ಎ.ಎ.ಹೈದರ್ ಪರ್ತಿಪ್ಪಾಡಿ, ಎನ್.ಎಸ್.ಕರೀಂ, ಅಲಿಕುಂಞಿ ಹಾಜಿ ಪಾರೆ ಮೊದಲಾದವರು ಉಪಸ್ಥಿತರಿದ್ದರು.

ಅಬ್ದುಲ್‌ಖಾದರ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ಹಾಜಿ ಬಿ.ಎಂ.ಮುಮ್ತಾಝ್ ಅಲಿ ಸ್ವಾಗತಿಸಿದರು.

ಕಾರ್ಯದರ್ಶಿ ಎಮ್ಮೆಸ್ಸೆಂ ಅಬ್ದುಲ್ ರಶೀದ್ ಝೈನಿ ಸನ್ಮಾನ ಕಾರ್ಯಕ್ರಮ ನಿರೂಪಿಸಿದರು.

ಕೆ.ಎಂ.ಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News