ಆರೋಪಿಗಳ ಪರ ವಾದಿಸದಂತೆ ವಕೀಲರಿಗೆ ಬಿಜೆಪಿ ಮಹಿಳಾ ಮೋರ್ಚಾ ಮನವಿ

Update: 2018-09-22 13:00 GMT

ಬಂಟ್ವಾಳ, ಸೆ. 22: ಗೂಡಿನಬಳಿ ಬಾಲಕಿಯ ಅತ್ಯಾಚಾರ ಪ್ರಕರಣದ ಆರೋಪಿಗಳ ಪರ ಜಿಲ್ಲಾ ಹಾಗೂ ತಾಲೂಕಿನ ವಕೀಲರು ವಾದಿಸದಂತೆ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಮನವಿ ಮಾಡಿದೆ.

ಶನಿವಾರ ಸಂಜೆ ಬಿ.ಸಿ.ರೋಡಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾ ಮಹಿಳಾ ಮೊರ್ಚಾದ ವಕ್ತಾರೆ ಸುಲೋಚನ ಜಿ.ಕೆ.ಭಟ್, ಪ್ರಕರಣವನ್ನು ಬಿಜೆಪಿ ಮಹಿಳಾ ಮೋರ್ಚವು ತೀವ್ರವಾಗಿ ಖಂಡಿಸಿದ್ದು, ಆರೋಪಿಗಳಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ನೀಡುವಂತೆ ಒತ್ತಾಯಿಸಿದರು.

ಶಾಸಕ ರಾಜೇಶ್ ನಾಯ್ಕ ಅವರು ಬಾಲಕಿ ಇದ್ದ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದು, ದೌರ್ಜನ್ಯ ಪ್ರಕರಣಗಳ ಸಂತ್ರಸ್ತರಿಗೆ ಧೈರ್ಯ ತುಂಬಲು ಕೌನ್ಸಲಿಂಗ್ ಕೇಂದ್ರಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿದರು. ಇಂಥ ಪ್ರಕರಣಗಳನ್ನು ಕೈಗೆತ್ತಿಕೊಳ್ಳದಂತೆ ವಕೀಲರಿಗೆ ಮನವಿ ಮಾಡಿದ ಅವರು, ಜಿಲ್ಲಾಡಳಿತ ಸಂತ್ರಸ್ತರ ಕುಟುಂಬಗಳಿಗೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.

ಕೋಲಾರದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಶೀಘ್ರವಾಗಿ ಶಿಕ್ಷೆಯಾದಂತೆ, ಈ ಪ್ರಕರಣದ ಆರೋಪಿಗಳಿಗೆ ಶೀಘ್ರವಾಗಿ ಶಿಕ್ಷೆಯಾಗಬೇಕು ಎಂದು ಮನವಿ ಮಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಪುರಸಭಾ ಅದ್ಯಕ್ಷೆ ಬಿ.ಯಶೋಧಾ, ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನಳಿನ್ ಶೆಟ್ಟಿ, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜಯಂತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News