ಶುದ್ಧ ಕುಡಿಯುವ ನೀರಿನ ಘಟಕಗಳ ಅಸಮರ್ಪಕ ನಿರ್ವಹಣೆ: ದ.ಕ. ಜಿ.ಪಂ. ಸದನ ಸಮಿತಿ ಮಧ್ಯಂತರ ವರದಿ ಮಂಡನೆ

Update: 2018-09-22 14:40 GMT

ಮಂಗಳೂರು, ಸೆ. 22: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಯಮಿತ (ಕೆಆರ್‌ಡಿಎಲ್)ದಿಂದ ದ.ಕ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಬಹುತೇಕ ಕಡೆಗಳಲ್ಲಿ ನಿಷ್ಪ್ರಯೋಜಕವಾಗುವಲ್ಲಿ ಅವುಗಳ ನಿರ್ವಹಣೆಯಲ್ಲಿ ನಿರಾಸಕ್ತಿ ಪ್ರಮುಖ ಕಾರಣ ಎಂಬ ಅಂಶ ಬಹಿರಂಗವಾಗಿದೆ.

ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ಇಂದು ನಡೆದ ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಘಟಕಗಳ ಪರಿಶೀಲನೆಗೆ ಸಂಬಂಧಿಸಿ ನಿಯೋಜಿಸಲಾಗಿರುವ ಸದನ ಸಮಿತಿಯ ಎರಡನೆ ಮಧ್ಯಂತರ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.

ಸಭೆಯಲ್ಲಿ ಸದನ ಸಮಿತಿಯ ಮಧ್ಯಂತರ ವರದಿಯನ್ನು ಮಂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ದನ ಗೌಡ, ಸದನ ಸಮಿತಿಯು ಮಂಗಳೂರು ತಾಲೂಕಿನ 35 ಘಟಕಗಳಿಗೆ ಹಾಗೂ ಬೆಳ್ತಂಗಡಿಯ 11 ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ಈ ಸಂದರ್ಭ ಮಂಗಳೂರಿನ ಘಟಕಗಳ ಪೈಕಿ 11 ಘಟಕಗಳು ಸ್ಥಳ ತಕರಾರು ಕುರಿತು ಗ್ರಾ.ಪಂನಲ್ಲಿ ಸ್ಪಷ್ಟತೆ ಇರದಿರುವುದು, ಕೆಲವು ಘಟಕಗಳು ಪ್ರಾರಂಭವಾಗಿರುವುದನ್ನು ಪರಿಶೀಲಿಸಲಾಗಿದೆ.

ಬೆಳ್ತಂಗಡಿಯ 10 ಘಟಕಗಳಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆಗಳ ಹೊರತಾಗಿಯೂ ಘಟಕಗಳು ಕಾರ್ಯ ನಿರ್ವಹಿಸುತ್ತಿರುವುದು ಸಮಿತಿಯ ಗಮನಕ್ಕೆ ಬಂದಿರುತ್ತದೆ. ಈ ಬಗ್ಗೆ ಸ್ಪಷ್ಟ ವರದಿ ನೀಡುವಂತೆ ಅನುಷ್ಠಾನ ಸಂಸ್ಥೆಗಳಾದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಮತ್ತು ಕೆಆರ್‌ಐಡಿಎಲ್‌ಗೆ ಸೂಚಿಸಲಾಗಿದೆ. ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು, ತಮ್ಮ ಪತ್ರದಲ್ಲಿ 70 ಘಟಕಗಳಿಗೆ ಅನುಮೋದನೆಯಾಗಿದ್ದು, ಅದರಲ್ಲಿ 29 ಕಾಮಗಾರಿಗನ್ನು ಕೈ ಬಿಡಲಾಗಿದ್ದು ಉಳಿದ 41ರಲ್ಲಿ 22 ಘಟಕಗಳನ್ನು ಪೂರ್ಣಗೊಳಿಸಲಾಗಿದೆ. ಉಳಿದ 19 ಘಟಕಗಳನ್ನು ಮರು ಟೆಂಡರ್ ಕರೆದು ನಿರ್ವಹಿಸುವುದಾಗಿ ತಿಳಿಸಿದ್ದಾರೆ. ಆದರೆ ಕೆಆರ್‌ಐಡಿಎಲ್‌ನಿಂದ ಘಟಕಗಳ ಅನುಷ್ಠಾನದ ಬಗ್ಗೆ ಯಾವುದೇ ವರದಿ ಕಚೇರಿಗೆ ಬಂದಿಲ್ಲ ಎಂದು ಜನಾರ್ದನ ಗೌಡ ಮಾಹಿತಿ ನೀಡಿದರು.

ಕೆಆರ್‌ಐಡಿಎಲ್ ಸಂಸ್ಥೆಯವರು ಪ್ರಾರಂಭಿಸಿದ ಘಟಕಗಳಲ್ಲಿ ಕೆಲವೆಡೆ ಅಡಿಪಾಯ ಕುಸಿದಿರುವುದು, ಕೆಲಸದಲ್ಲಿ ತಾಂತ್ರಿಕ ಕೊರತೆ ಕಂಡು ಬಂದಿದೆ. ಕೆಲ ಘಟಕಗಳನ್ನು ಆರಂಭಿಸಿ ವರ್ಷವೇ ಕಳೆದರೂ ಸ್ಥಳೀಯ ಪಂಚಾಯತ್ ಸದಸ್ಯರಿಗೆ, ಅಭಿವೃದ್ಧಿ ಅಧಿಕಾರಿಗಳಿಗೆ, ಪಂಚಾಯತ್ ಸಿಬ್ಬಂದಿಗಳಿಗೆ ಮಾಹಿತಿಯೇ ಇಲ್ಲ. ಕೆಆರ್‌ಐಡಿಎಲ್ ತಾಂತ್ರಿಕ ಸಿಬ್ಬಂದಿಗಳಲ್ಲಿ ಹೊಂದಾಣಿಕೆ ಕಂಡು ಬಂದಿಲ್ಲ. ಘಟಕಗಳಿಗೆ ಹೋಗಲು ಸರಿಯಾದ ದಾರಿ ವ್ಯವಸ್ಥೆ, ನೀರು ಸಂಗ್ರಹಿಸಲು ಮೆಟ್ಟಲು ಇರದಿರುವುದು ಕಂಡು ಬಂದಿದೆ. ಸ್ವಚ್ಛತೆಯ ಕೊರತೆಯೂ ಕಂಡುಬಂದಿದೆ. ಗ್ರಾ.ಪಂ. ಮಟ್ಟದ ಅಧಿಕಾರಿಗಳು/ ಸಿಬ್ಬಂದಿಗಳು ನೀರಿನ ಘಟಕಗಳ ನಿರ್ವಹಣೆ ಬಗ್ಗೆ ಆಸಕ್ತಿಯನ್ನು ತೋರದಿರುವುದು ಕಂಡು ಬಂದಿರುತ್ತದೆ ಎಂದು ಜನಾರ್ದ ಗೌಡ ವರದಿಯನ್ನು ಮಂಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಶುದ್ಧ ಕುಡಿಯುವ ನೀರಿನ ನಿರ್ವಹಣೆಯಲ್ಲಿ ಆಗಿರುವ ಲೋಪದ ಬಗ್ಗೆ ವಿಧಾನಪರಿಷತ್ ಸಭೆಯಲ್ಲಿ ಪ್ರಸ್ತಾಪಿಸಿ ಸರಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

ಕಂದಾಯ ಸಮಸ್ಯೆ ಪರಿಹಾರಕ್ಕೆ ವಿಶೇಷ ನೋಡಲ್ ಅಧಿಕಾರಿ ನೇಮಕಕ್ಕೆ ಪತ್ರ ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿ ಸಾಕಷ್ಟು ಚರ್ಚೆಗಳು ನಡೆಯುತ್ತವೆಯಾದರೂ ಜಿಲ್ಲಾಧಿಕಾರಿಯಾದಿಯಾಗಿ ಸಭೆಯಲ್ಲಿ ಕಂದಾಯ ಅಧಿಕಾರಿಗಳು ಭಾಗವಹಿಸುತ್ತಿಲ್ಲ ಎಂಬ ಆಕ್ಷೇಪ ಸದಸ್ಯರಿಂದ ವ್ಯಕ್ತವಾಯಿತು.

ಇಲಾಖೆಗಳ ಸಂವಹನ ಕೊರತೆಯಿಂದ ಕಂದಾಯ ಅಧಿಕಾರಿಗಳು ಸಭೆಗೆ ಹಾಜರಾಗುತ್ತಿಲ್ಲ ಎಂದು ಜನಾರ್ದನ ಗೌಡ ಹೇಳಿದರೆ, ಕಂದಾಯ ಅಧಿಕಾರಿಗಳಿಲ್ಲದೆ ಇಲಾಖೆಯ ಹಲವಾರು ಸಮಸ್ಯೆಗಳಿಗೆ ಪರಿಹಾರವೇ ದೊರಕುತ್ತಿಲ್ಲ ಎಂದು ಎಂ.ಎಸ್. ಮುಹಮ್ಮದ್, ಸುಚರಿತ ಶೆಟ್ಟಿ ಮೊದಲಾವದರು ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯ ಶಾಹುಲ್ ಹಮೀದ್ ಮಾತನಾಡಿ, ಬೆಳ್ತಂಗಡಿ ತಾ.ಪಂ.ನಲ್ಲಿಯೂ ಕಂದಾಯ ಅಧಿಕಾರಿಗಳ ಅನುಪಸ್ಥಿತಿಯಿಂದಾಗಿ ಎರಡು ಸಭೆಗಳು ರದ್ದಾಗಿವೆ ಎಂದು ಹೇಳಿದರು. ಬಂಟ್ವಾಳದ ನರಿಂಗಾನದಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದವರಿಗೆ ಕಳೆದ ನಾಲ್ಕು ತಿಂಗಳಾದರೂ ಪರಿಹಾರದ ಚೆಕ್ ವಿತರಣೆಯಾಗಿಲ್ಲ ಎಂದು ಸದಸ್ಯೆ ಮಮತಾ ಗಟ್ಟಿ ಸಭೆಯಲ್ಲಿ ಪ್ರಸ್ತಾಪಿಸಿದರು. 

ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಮುಂದಿನ ಸಭೆಗೆ ಕಂದಾಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುವಂತೆ ನಿರ್ಣಯಿಸುವುದಾಗಿ ಹೇಳಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಕಂದಾಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವಂತೆ ಅವರಿಗೆ ಸೂಚನೆ, ನೋಟೀಸು ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.

ಈ ಸಂದರ್ಭ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಪ್ರತಿಕ್ರಿಯಿಸಿ, ಮುಂದಿನ ದಿನಗಳಲ್ಲಿ ಸಭೆಗೆ ಒಂದು ತಿಂಗಳು ಅಥವಾ 15 ದಿನಗಳಿಗೆ ಮುಂಚಿತವಾಗಿ ಕಂದಾಯ ಇಲಾಖೆಯ ವಿಷಯಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿ ಅವರಿಂದ ಉತ್ತರ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಭಾಗವಹಿಸಲು ಸೂಚಿಸಲಾಗುವುದು. ಜಿಲ್ಲಾಧಿಕಾರಿಗಳು ಖುದ್ದಾಗಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಕಷ್ಟಸಾಧ್ಯವಾದ ಹಿನ್ನೆಲೆಯಲ್ಲಿ ಈ ವಿಷಯಗಳ ಬಗ್ಗೆ ವ್ಯವಹರಿಸಲು ವಿಶೇಷ ನೋಡಲ್ ಅಧಿಕಾರಿಯನ್ನು ನಿಯೋಜಿಸಲು ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ಜಿಲ್ಲಾ ಮಟ್ಟದ ಕಂದಾಯ ವಿಷಯಗಳಿಗೆ ಸಂಬಂಧಿಸಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಶೇಷ ಸಭೆಯನ್ನು ನಡೆಸಲು ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.

ಸುಳ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ಪಡಿತರ ಚೀಟಿಗ ಸಂಬಂಧಿಸಿದಂತೆ ತೊಂದರೆ ಆಗಿರುವುದಾಗಿ ಸದಸ್ಯೆ ಸುಜಾ ಕೆ.ಪಿ. ಸಭೆಯಲ್ಲಿ ಪ್ರಸ್ತಾಪಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ, ಪಡಿತರ ಚೀಟಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ಕಾರ್ಡ್ ಒದಗಿಸುವ ಕಾರ್ಯ ನಡೆಯುತ್ತಿದೆ. 5000 ಅರ್ಜಿಗಳನ್ನೂ ಬಾಕಿ ಇದೆ ಎಂದು ಹೇಳಿದರು.

ಆ ಕಾರ್ಯವನ್ನು ಸಮಯ ನಿಗದಿ ಮಾಡಿ ಪೂರೈಸುವಂತೆ ಸೂಚಿಸಿದ ಸಿಇಒ ಡಾ. ಸೆಲ್ವಮಣಿ, ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಆ ಕಾರ್ಯ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಸಭೆಯಲ್ಲಿ ‘ಸ್ವಚ್ಛತಾ ಹಿ ಸೇವಾ’ ಜನಾಂದೋಲನ ಕಾರ್ಯಕ್ರಮಡಿ ಜಿಲ್ಲಾ ಮಟ್ಟದಲ್ಲಿ ಸಾಮಾನ್ಯ ಸಭೆಯಲ್ಲಿ ಸಂದೇಶದ ಮೂಲಕ ಅಧ್ಯಕ್ಷೆ ಮೀಾಕ್ಷಿ ಶಾಂತಿಗೋಡು ಚಾಲನೆ ನೀಡಿದರು. ಸಭೆಯಲ್ಲಿ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಇಬ್ರಾಹೀಂ, ಅನಿತಾ ಹೇಮನಾಥ್ ಉಪಸ್ಥಿತರಿದ್ದರು.

ಲಂಚ ಬೇಡಿಕೆ ಆರೋಪ: ತನಿಖೆ ಮಾಡಿ ಕ್ರಮ

ಶಾಸಕರ ಸಮ್ಮುಖದಲ್ಲೇ ಪಿಡಿಒಗಳಿಂದ ಲಂಚದ ಬೇಡಿಕೆ ಇರಿಸಿದ ಆರೋಪದ ಮೇರೆಗೆ ಮಂಗಳೂರು ತಾ.ಪಂ. ಪ್ರಭಾರ ಇಒ ಹುದ್ದೆಯಿಂದ ತೆರವುಗೊಂಡಿರುವ ಸದಾನಂದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಜಿಲ್ಲಾ ಪಂಚಾಯತ್ ಸದಸ್ಯರಿಂದ ವ್ಯಕ್ತವಾಯಿತು.

ತಮ್ಮ ಮೇಲಧಿಕಾರಿಗಳ ಬಗ್ಗೆ ಶಾಸಕರೆದುರೇ ಬೇಡಿಕೆ ಇರಿಸಿದ್ದ ಅಧಿಕಾರಿ ವಿರುದ್ಧ ತಕ್ಷಣ ಕ್ರಮ ಆಗಬೇಕು. ಅಧಿಕಾರಿಯೊಬ್ಬರು ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಮಾತ್ರವಲ್ಲದೆ, ಅವರನ್ನು ಪ್ರಭಾರ ಹುದ್ದೆಯಿಂದ ತೆರವುಗೊಳಿಸಿದ ಬಳಿಕವೂ ಅವರು 40 ಕಡತಗಳನ್ನು ವಿಲೇ ಮಾಡಿರುವ ಮಾಹಿತಿ ಇದೆ. ಹಾಗಾಗಿದ್ದಲ್ಲಿ ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಆಗ್ರಹಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಅವರು ಪ್ರಕರಣದ ಬಗ್ಗೆ ಮಾಹಿತಿ ಒದಗಿಸಿದರು. ಅಧಿಕಾರಿಯನ್ನು ಪ್ರಭಾರ ಹುದ್ದೆಯಿಂದ ತೆರವುಗೊಳಿಸಿದ ಬಳಿಕವೂ ಅವರು ಕಡತವನ್ನು ವಿಲೇ ಮಾಡಿದ್ದಲ್ಲಿ ಅದಕ್ಕೆ ಅಗತ್ಯ ಶಿಸ್ತು ಕ್ರಮ ಕೈಗೊಳ್ಳಲು ತಮ್ಮ ಪೂರ್ಣ ಸಹಕಾರವಿದೆ ಎಂು ಹೇಳಿದರು.

ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈೊಳ್ಳುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News