ಜ್ವರದಿಂದ ಬಳಲುತ್ತಿದ್ದ ಮಕ್ಕಳನ್ನು ಪರಿಶೀಲಿಸಿದ ಡಾ. ಕಫೀಲ್ ಖಾನ್ ಪೊಲೀಸ್ ವಶಕ್ಕೆ

Update: 2018-09-22 15:08 GMT

ಲಕ್ನೋ, ಸೆ. 22: ಗೋರಖ್‌ಪುರ ಬಿಆರ್‌ಡಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಅಮಾನತುಗೊಂಡ ಮಕ್ಕಳ ತಜ್ಞ ಡಾ. ಕಫೀಲ್ ಖಾನ್ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾದ ಮಕ್ಕಳನ್ನು ಶನಿವಾರ ಪರಿಶೀಲನೆ ನಡೆಸಿದ ಬಳಿಕ ಬಹ್ರೈಕ್ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಇತ್ತೀಚೆಗೆ 45 ದಿನಗಳಲ್ಲಿ 71 ಮಕ್ಕಳು ನಿಗೂಢ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಈ ಆಸ್ಪತ್ರೆ ಸುದ್ದಿಯಲ್ಲಿತ್ತು. ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾದ ಮಕ್ಕಳ ಹೆತ್ತವರೊಂದಿಗೆ ಮಾತನಾಡಿದ ಖಾನ್ ಹಾಗೂ ಅವರ ಬೆಂಬಲಿಗರು ನಿಗೂಢ ಜ್ವರ ಎಂಬುದನ್ನು ತಳ್ಳಿ ಹಾಕಿದ್ದಾರೆ ಹಾಗೂ ಇದು ಮೆದುಳು ಜ್ವರದ ಲಕ್ಷಣ ಎಂದಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಪೊಲೀಸರು ಕಫೀಲ್ ಖಾನ್ ಅವರನ್ನು ವಶಕ್ಕೆ ತೆಗೆದುಕೊಂಡರು ಹಾಗೂ ಸಿಂಭೌಲಿ ಸಕ್ಕರೆ ಕಾರ್ಖಾನೆಯ ಅತಿಥಿ ಗೃಹಕ್ಕೆ ಕರೆದೊಯ್ದರು.

ಕಫೀಲ್ ಖಾನ್ ಅವರನ್ನು ಕಾನೂನು ಬಾಹಿರವಾಗಿ ವಶಕ್ಕೆ ಪಡೆಯಲಾಗಿದೆ. ಅವರನ್ನು ಭೇಟಿಯಾಗಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ಮಾಧ್ಯಮದೊಂದಿಗೆ ಮಾತನಾಡಿದ ಕಫೀಲ್ ಖಾನ್ ಅವರ ಸಹೋದರ ಅದೀಲ್ ಅಹ್ಮದ್ ಖಾನ್ ಹೇಳಿದ್ದಾರೆ. ‘‘ನನ್ನ ಸಹೋದರನನ್ನು ಕಾನೂನು ಬಾಹಿರವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಹಾಗೂ ಸಿಂಭೌಲಿ ಸಕ್ಕರೆ ಕಾರ್ಖಾನೆಯ ಅತಿಥಿ ಗೃಹದಲ್ಲಿ ಇರಿಸಲಾಗಿದೆ. ನನಗೆ ಕೂಡ ಅತಿಥಿ ಗೃಹಕ್ಕೆ ಹೋಗಲು ಅವಕಾಶ ನೀಡುತ್ತಿಲ್ಲ. ನನ್ನ ಸಹೋದರ ಮಾಡಿದ ಒಂದೇ ಒಂದು ತಪ್ಪೆಂದರೆ, ವೈದ್ಯರು ನಿಗೂಢ ಜ್ವರ ಎಂದು ಹೇಳಿರುವುದನ್ನು ಅಲ್ಲಗಳೆದಿರುವುದು. ಕಫೀಲ್ ಖಾನ್ ಅವರ ಪ್ರಕಾರ ಅದು ಮೆದುಳು ಜ್ವರದ ಲಕ್ಷಣ.’’ ಎಂದು ಅದೀಲ್ ಅಹ್ಮದ್ ಖಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News