13,000 ಕೋ.ರೂ.ವೆಚ್ಚದ ತಾಲ್ಚೇರ್ ರಸಗೊಬ್ಬರ ಯೋಜನೆಗೆ ಪ್ರಧಾನಿಯಿಂದ ಶಂಕುಸ್ಥಾಪನೆ

Update: 2018-09-22 17:45 GMT

ತಾಲ್ಚೇರ್(ಒಡಿಶಾ),ಸೆ.22: ತಾಲ್ಚೇರ್ ರಸಗೊಬ್ಬರ ತಯಾರಿಕೆ ಕಾರ್ಖಾನೆಯ ಪುನರುಜ್ಜೀವನಕ್ಕಾಗಿ 13,000 ಕೋ.ರೂ.ವೆಚ್ಚದ ಯೋಜನೆಗೆ ಶನಿವಾರ ಇಲ್ಲಿ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿಯವರು,ನಿಗದಿತ 36 ತಿಂಗಳುಗಳ ಅವಧಿಯಲ್ಲಿ ಉತ್ಪಾದನೆ ಆರಂಭಗೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ರಸಗೊಬ್ಬರ ಕಾರ್ಖಾನೆಯು ಬೇವು ಲೇಪಿತ ಯೂರಿಯಾ ಉತ್ಪಾದನೆಗಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಕಲ್ಲಿದ್ದಲನ್ನು ಅನಿಲವಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಹೊಂದಿರಲಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ,36 ತಿಂಗಳುಗಳಲ್ಲಿ ಉತ್ಪಾದನೆ ಆರಂಭಗೊಳ್ಳಲಿದೆ ಎಂದು ತನಗೆ ಮಾಹಿತಿ ನೀಡಲಾಗಿದೆ. ಯೋಜನೆಯನ್ನು ಉದ್ಘಾಟಿಸಲು 36 ತಿಂಗಳುಗಳ ಬಳಿಕ ತಾನು ಇಲ್ಲಿಗೆ ಮತ್ತೆ ಆಗಮಿಸುತ್ತೇನೆ ಎಂದು ಹೇಳಿದರು.

 ನೈಸರ್ಗಿಕ ಅನಿಲ ಮತ್ತು ರಸಗೊಬ್ಬರಗಳ ಆಮದನ್ನು ಕಡಿತಗೊಳಿಸಲು ಮತ್ತು ಭಾರತವನ್ನು ಸ್ವಾವಲಂಬಿಯಾಗಿಸಲು ಈ ಯೋಜನೆಯು ನೆರವಾಗಲಿದೆ ಎಂದ ಅವರು, ರಸಗೊಬ್ಬರ ಕಾರ್ಖಾನೆಗಳಂತಹ ಯೋಜನೆಗಳು ಭಾರತದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ಹೊಂದಿವೆ,ಈ ಕಾರ್ಖಾನೆಯು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಿದೆ ಎಂದರು.

ಯೋಜನೆಯು ವಾರ್ಷಿಕ 1.27 ಮಿ.ಟನ್ ಬೇವುಲೇಪಿತ ಯೂರಿಯಾವನ್ನು ಉತ್ಪಾದಿಸಲಿದೆ ಮತ್ತು ಸುಮಾರು 4,500 ಜನರಿಗೆ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದ ಮೋದಿ,ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ಕೂಟವು ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ ಮತ್ತು ದೇಶದ ‘ಕಿರೀಟ ರತ್ನಗಳು’ ಹೇಗೆ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿವೆ ಎನ್ನುವುದಕ್ಕೆ ಇದು ಉಜ್ವಲ ಉದಾಹರಣೆಯಾಗಿದೆ ಎಂದರು.

ಭಾರತೀಯ ರಸಗೊಬ್ಬರ ನಿಗಮಕ್ಕೆ ಸೇರಿದ ತಾಲ್ಚೇರ್ ರಸಗೊಬ್ಬರ ಕಾರ್ಖಾನೆಯು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯಗಳು ಮತ್ತು ಹಳೆಯ ಕಾಲದ ತಂತ್ರಜ್ಞಾನದಿಂದಾಗಿ ಆರ್ಥಿಕ ಹೊರೆಯಾಗಿದ್ದರಿಂದ 2002ರಲ್ಲಿ ಆಗಿನ ಎನ್‌ಡಿಎ ಸರಕಾರವು ಅದನ್ನು ಮುಚ್ಚಿತ್ತು. ಕಾರ್ಖಾನೆಗೆ ಪುನರುಜ್ಜೀವನ ನೀಡಲು ಸರಕಾರವು 2011,ಆಗಸ್ಟ್‌ನಲ್ಲಿ ನಿರ್ಧರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News