ವಿದ್ವತ್ ಪರಂಪರಾ, ಮಹೋಪಾಧ್ಯಾಯ ಪ್ರಶಸ್ತಿಗೆ ಆಯ್ಕೆ

Update: 2018-09-22 15:44 GMT

ಮೂಡುಬಿದಿರೆ, ಸೆ. 22:  ಕಾಂತಾವರ  ಕನ್ನಡ ಸಂಘವು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಸಿದ್ಧ ನಿಘಂಟುಕಾರ ದಿವಂಗತ ಪಂಡಿತ ಯಜ್ಞನಾರಾಯಣ ಉಡುಪ ಕುಂದಾಪುರ ಅವರ ಮಕ್ಕಳು ಸಂಘದಲ್ಲಿ ಇರಿಸಿರುವ ದತ್ತಿನಿಧಿಯಿಂದ ನೀಡುವ 'ವಿದ್ವತ್ ಪರಂಪರಾ ಪ್ರಶಸ್ತಿ'ಗೆ, ಕೆ.ಎಸ್.ನಾರಾಯಣ ಆಚಾರ್ಯ ಅವರು ಮತ್ತು ಉಡುಪಿಯ ಪ್ರಸಿದ್ಧ ಜಾನಪದ ತಜ್ಞ ಮತ್ತು ತುಳು ನಿಘಂಟುಕಾರ ಡಾ. ಯು.ಪಿ. ಉಪಾಧ್ಯಾಯ ಅವರು ಸಂಘದಲ್ಲಿ ಇರಿಸಿರುವ  ದತ್ತಿನಿಧಿಯಿಂದ ನೀಡುವ 'ಮಹೋಪಾಧ್ಯಾಯ ಪ್ರಶಸ್ತಿ'ಗೆ ಡಿ.ವಿಷ್ಣು ಭಟ್ ಅವರು ಆಯ್ಕೆಯಾಗಿದ್ದಾರೆ ಎಂದು ಸಂಘದ ಕಾರ್ಯಾಧ್ಯಕ್ಷ  ನಿರಂಜನ ಮೊಗಸಾಲೆ ಅವರು ಘೋಷಿಸಿದ್ದಾರೆ.

ಈ ಪ್ರಶಸ್ತಿಯು ತಲಾ ಹತ್ತು ಸಾವಿರ ನಗದು, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದು  ನ.1 ರ ಸಂಜೆ ಕಾಂತಾವರದಲ್ಲಿರುವ 'ಕನ್ನಡಭವನ'ದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ  ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆ.ಎಸ್.ನಾರಾಯಣ ಆಚಾರ್ಯ

ಬೆಂಗಳೂರು ಜಿಲ್ಲೆ ಕನಕಪುರದ ವೈದಿಕ ಶ್ರೀವೈಷ್ಣವ ಕುಟುಂಬದಲ್ಲಿ ಜನಿಸಿದ ಶ್ರೀ ಕೆ.ಎಸ್.ನಾರಾಯಣ ಆಚಾರ್ಯ(1933) ಅವರು ಮೈಸೂರು ವಿಶ್ವ ವಿದ್ಯಾನಿಲಯದಿಂದ ಬಿ.ಎಸ್ಸಿ; ಬಿ.ಎ,ಆನರ್ಸ್, ಎಂ.ಎ(ಇಂಗ್ಲೀಷ್) ಪದವಿಗಳನ್ನು ಪಡೆದುಕೊಂಡು “ಡಬ್ಲ್ಯು. ಬಿ.ಯೇಟ್ಸ್ ಮತ್ತು ಟಿ.ಎಸ್.ಎಲಿಯೇಟರ್ ಕಾವ್ಯದ ಮೇಲೆ ಭಾರತೀಯ ತತ್ವಶಾಸ್ತ್ರ ಪ್ರಭಾವ” ಎಂಬ ವಿಷಯದಲ್ಲಿ ಪಿ.ಎಚ್.ಡಿ ಪದವಿ ಪಡೆದವರು.

ಧಾರವಾಡದ ಕರ್ನಾಟಕ ಆಟ್ರ್ಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ಅದೇ ಕಾಲೇಜಿನಲ್ಲಿ ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ದುಡಿದು 1993ರಲ್ಲಿ ನಿವೃತ್ತರಾದರು.

'ವೇದ ವಿದ್ಯಾ ಪ್ರಕಾಶನ' ಮತ್ತು 'ಮಾಲೋಲ ಪ್ರಕಾಶನ' ಎಂಬ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳ ಮುಖಾಂತರ ವೇದ ಸಂಸ್ಕøತಿಯನ್ನು ಪರಿಚಯಿಸುವ ಮೂರು ಬೃಹತ್ ಸಂಪುಟಗಳನ್ನು ಮತ್ತು 'ಶ್ರೀಕೃಷ್ಣಾವತಾರದ ಎರಡು ಸಂಪುಟಗಳು', 'ಭಾರತೀಯ ಇತಿಹಾಸ ಪುರಾಣಗಳು', 'ಭಾರತ ಇಸ್ಲಾಂ ಮತ್ತು ಗಾಂಧಿ', 'ಮತಾಂತರ: ಒಳಹೊರ ಆಯಾಮಗಳು', 'ರಾಷ್ಟ್ರೀಯತೆ ಮತ್ತು ಸಂಸ್ಕøತಿ' ಇತ್ಯಾದಿ ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ಹಾಗೇ  ಕನ್ನಡ ಮತ್ತು ಇಂಗ್ಲೀಷಿನಲ್ಲಿ ನೂರೈವತ್ತಕ್ಕೂ ಮಿಕ್ಕಿದ ಅಪೂರ್ವ ಗ್ರಂಥಗಳನ್ನು ನಾಡಿಗೆ  ನೀಡಿದ ಅಪರೂಪದ ವಿದ್ವಾಂಸರು.

ವಿದ್ವನ್ಮಣಿ, ವೇದಭೂಷಣ, ವಾಲ್ಮೀಕಿ ಹೃದಯಜ್ಞ, ರಾಮಾಯಣಾಚಾರ್ಯ, ಗಮಕ ರತ್ನಾಕರ, ಬಿರುದುಗಳಲ್ಲದೆ ನೃತ್ಯ ಸಂಗೀತ ಅಕಾಡೆಮಿಯಿಂದ 'ಕರ್ನಾಟಕ ಕಲಾಶ್ರೀ ಪ್ರಶಸ್ತಿ', ವೇದ ಸಂಸ್ಕೃತಿಯ ಮಾಲೆಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳ ಜೊತೆ ಅವರಿಗೆ ನೂರಾರು ಪ್ರಶಸ್ತಿ, ಪುರಸ್ಕಾರಗಳು ಬಂದಿವೆ.

ಡಿ.ವಿಷ್ಣುಭಟ್ ಡೋಂಗ್ರೆ

ಬೆಳ್ತಂಗಡಿ ಮೂಲದ ವಿಷ್ಣುಭಟ್ ಡೋಂಗ್ರೆ ಅವರು ಭಾರತೀಯ ದರ್ಶನಗಳನ್ನು ನಮ್ಮ ಮುಂದೆ ತೆರೆದಿಡಬಲ್ಲವರಲ್ಲಿ ಒಬ್ಬರು. ಸಂಸ್ಕøತ, ಹಿಂದಿ ಭಾಷೆಗಳಲ್ಲಿ ವಿಶೇಷ ನೈಪುಣ್ಯವನ್ನು ಪಡೆದಿರುವ ಅವರು - ವೇದಗಳ ಅರ್ಥವನ್ನು ಸಾಂಪ್ರದಾಯಿಕವಾಗಿ ಹೇಳುವಷ್ಟೇ ಸಮರ್ಥವಾಗಿ ಆಧುನಿಕ ಯುಗದಲ್ಲೂ ಅವು ಹೇಗೆ ಪ್ರಸ್ತುತ ಎಂಬುದನ್ನು ಸಮರ್ಥವಾಗಿ ಸಮರ್ಥಿಸಬಲ್ಲ ವಿದ್ವಾಂಸ.

ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಓದಿರುವ ಅವರು ಸ್ವಾಧ್ಯಾಯ ಮತ್ತು ಪರಿಶ್ರಮದಿಂದ ಹಿಂದಿ ಮತ್ತು ಸಂಸ್ಕøತದಲ್ಲಿ ಉನ್ನತ ಪದವಿಗಳನ್ನು ಗಳಿಸಿದರು. ಕೊಡಗಿನ ಚಯ್ಯಂಡಾಣೆಯ  ಪ್ರೌಢ ಶಾಲೆಯಲ್ಲಿ ಅಧ್ಯಾಪಕರಾಗಿ ರಾಜ್ಯಸರಕಾರದ ಉತ್ತಮಶಿಕ್ಷಕ ಪ್ರಶಸ್ತಿಗೂ ಭಾಜನರಾದರು. ಅವರಿಗೆ ಸಾಹಿತ್ಯಕೃಷಿಯಲ್ಲಿ ಅಪಾರ ಆಸಕ್ತಿ. ಮಹಾಕಾವ್ಯ ರಚನೆಯಲ್ಲಿ ಎಲ್ಲಿಲ್ಲದ ಉತ್ಸಾಹ. ನವೋದಯದ ಸಂಪ್ರದಾಯದಲ್ಲಿ ಅವರು ಬರೆದ ಮೊದಲ ಮಹಾಕಾವ್ಯ 'ಮಹಾನಾರಿ ನಾಳಾಯಿನಿ' ಆಮೇಲೆ ಅವರು 'ಚಂದ್ರಗುಪ್ತ ಮೌರ್ಯ'ವೇ ಮೊದಲಾದ ನಾಲ್ಕು ಖಂಡ ಕಾವ್ಯಗಳನ್ನು ಬರೆದಿದ್ದಾರೆ. ಎರಡು ನಾಟಕ, ಇಪ್ಪತ್ತೇಳು ಧಾರ್ಮಿಕ ಆಧ್ಯಾತ್ಮಿಕ ಕೃತಿಗಳು ಒಂಬತ್ತು ಕಾದಂಬರಿಗಳು - ಅವರ ಸೃಜನಶೀಲ ಸಾಹಿತ್ಯ ಕೃತಿಗಳು.

ಅವರು ಮೊದಲು ಕೊಡಗಿನ ವಿರಾಜಪೇಟೆ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಆಮೇಲೆ ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಅವರನ್ನು ಅರಸಿ ಬಂತು. ಅವರು ದಕ್ಷಿಣ ಕನ್ನಡ ಜಿಲ್ಲೆಯವರೆಂದು ಬೆಳ್ತಂಗಡಿ ತಾಲೂಕು ಸಮ್ಮೇಳನದ ಅಧ್ಯಕ್ಷತೆಯೂ ಅವರಿಗೆ ಪ್ರಾಪ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News