ಇರಾನ್: ವಾರ್ಷಿಕ ಮಿಲಿಟರಿ ಪರೇಡ್‌ನ ಮೇಲೆ ಬಂದೂಕುಧಾರಿಗಳಿಂದ ದಾಳಿ

Update: 2018-09-22 15:50 GMT

ಟೆಹರಾನ್,ಸೆ.22: 1980ರ ದಶಕದಲ್ಲಿ ಇರಾಕ್ ವಿರುದ್ಧ ಇರಾನ್‌ನ ಸುದೀರ್ಘ ಯುದ್ಧದ ಸ್ಮರಣಾರ್ಥ ಶನಿವಾರ ತೈಲಸಮೃದ್ಧ ಖುಝೆಸ್ತಾನ್ ಪ್ರಾಂತ್ಯದ ರಾಜಧಾನಿ ಅಹ್ವಾಝ್‌ನಲ್ಲಿ ನಡೆಯುತ್ತಿದ್ದ ವಾರ್ಷಿಕ ಮಿಲಿಟರಿ ಪರೇಡ್‌ನ ಮೇಲೆ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 24 ಜನರು ಸಾವನ್ನಪ್ಪಿದ್ದು,ಇತರ 53 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪಥ ಸಂಚಲನದಲ್ಲಿ ತೊಡಗಿದ್ದ ಸೈನಿಕರು,ವೀಕ್ಷಕರು ಮತ್ತು ಸಮೀಪದ ವೇದಿಕೆಯಲ್ಲಿದ್ದ ಸರಕಾರಿ ಅಧಿಕಾರಿಗಳ ಮೇಲೆ ಗುಂಡುಗಳ ಸುರಿಮಳೆಯಾಗಿದ್ದು, ಯಾವುದೇ ಗುಂಪು ತಕ್ಷಣಕ್ಕೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.

 ಆದರೆ ಕಳೆದ ವರ್ಷ ಜೂ.7ರಂದು ಐಸಿಸ್ ಇರಾನ್‌ನ ಸಂಸತ್ತು ಮತ್ತು ಆಯತುಲ್ಲಾ ಅವರ ಸಮಾಧಿ ಸ್ಥಳದ ಮೇಲೆ ಭೀಕರ ದಾಳಿ ನಡೆಸಿದ್ದು,ಕನಿಷ್ಠ 18 ಜನರು ಸಾವನ್ನಪ್ಪಿದ್ದರು ಮತ್ತು 50ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಪ್ರದೇಶದಲ್ಲಿನ ಅರಬ್ ಪ್ರತ್ಯೇಕತಾವಾದಿಗಳು ಈ ಹಿಂದೆ ತೈಲ ಕೋಳವೆ ಮಾರ್ಗಗಳ ಮೆಲೆ ದಾಳಿಗಳನ್ನು ನಡೆಸಿದ್ದರು.

ಬೈಕ್‌ನಲ್ಲಿದ್ದ ಖಾಕಿ ಸಮವಸ್ತ್ರ ಧರಿಸಿದ್ದ ಇಬ್ಬರು ಬಂದೂಕುಧಾರಿಗಳು ದಾಳಿಯನ್ನು ನಡೆಸಿದ್ದರು ಎಂದು ಫಾರ್ಸ್ ನ್ಯೂಸ್ ಏಜೆನ್ಸಿಯು ವರದಿ ಮಾಡಿದ್ದರೆ,ಇಬ್ಬರು ದಾಳಿಕೋರರನ್ನು ಕೊಲ್ಲಲಾಗಿದೆ ಮತ್ತು ಇತರ ಇಬ್ಬರನ್ನು ಬಂಧಿಸಲಾಗಿದೆ ಎಂದು ಖುಝೆಸ್ತಾನ್ ರಾಜ್ಯಪಾಲ ಘೋಲಮ್‌ರೆಝಾ ಶರಿಯಾತಿ ಅವರು ಸುದ್ದಿಗಾರರಿಗೆ ತಿಳಿಸಿದರು. ದಾಳಿಯ ಹಿಂದೆ ಪ್ರಾದೇಶಿಕ ರಾಷ್ಟ್ರಗಳು ಮತ್ತು ಅವುಗಳ ‘ಅಮೆರಿಕನ್ ಒಡೆಯರ’ ಕೈವಾಡವಿದೆಯೆಂದು ಇರಾನ್‌ನ ವಿದೇಶಾಂಗ ಸಚಿವ ಮುಹಮ್ಮದ್ ಜಾವೇದ್ ಶರೀಫ್ ಅವರು ಆರೋಪಿಸಿದ್ದಾರೆ. ಒಪ್ಪಂದದಿಂದ ಅಮೆರಿಕಾ ಹಿಂದೆ ಸರಿದ ಬಳಿಕ ವಿಶ್ವದ ಪ್ರಬಲ ರಾಷ್ಟ್ರಗಳೊಡನೆ ಇರಾನ್‌ನ ಪರಮಾಣು ಒಪ್ಪಂದ ಬಿಕ್ಕಟ್ಟಿಗೆ ಸಿಲುಕಿರುವುದರಿಂದ ಶರೀಫ್ ಅವರ ಈ ಆರೋಪವು ಪ್ರಾದೇಶಿಕ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿದೆ.

ತನ್ನ ಜನರ ರಕ್ಷಣೆಗಾಗಿ ಇರಾನ್ ಚುರುಕಾಗಿ ಮತ್ತು ದೃಢನಿರ್ಧಾರದೊಂದಿಗೆ ಪ್ರತಿಕ್ರಿಯಿಸಲಿದೆ ಎಂದೂ ಶರೀಫ್ ಟ್ವೀಟಿಸಿದ್ದಾರೆ.

 ಭಯೋತ್ಪಾದಕರನ್ನು ವಿದೇಶಿ ಆಡಳಿತವು ಭರ್ತಿ ಮಾಡಿಕೊಂಡು ತರಬೇತುಗೊಳಿಸಿದೆ. ಅವರಿಗೆ ಶಸ್ತ್ರಾಸ್ತ್ರಗಳನ್ನು ಮತ್ತು ಹಣವನ್ನು ಒದಗಿಸಿದೆ ಎಂದು ಶರೀಫ್ ಟ್ವೀಟಿಸಿದ್ದಾರೆ.

ಇರಾನಿನ ಶಿಟ್ಟೆ ಧಾರ್ಮಿಕ ನಾಯಕತ್ವವು ಸುನ್ನಿ ಅರಬ್ ಪ್ರಜೆಗಳ ವಿರುದ್ಧ ತಾರತಮ್ಯಗಳನ್ನೆಸಗುತ್ತಿದೆ ಎಂದು ಅರಬ್ ಪ್ರತ್ಯೇಕತಾವಾದಿಗಳು ಆರೋಪಿಸುತ್ತಿದ್ದರೆ,ಅವರ ಚಟುವಟಿಕೆಗಳಿಗೆ ತನ್ನ ಬದ್ಧವೈರಿಯಾಗಿರುವ ಸೌದಿ ಅರೇಬಿಯಾ ಆರ್ಥಿಕ ನೆರವನ್ನು ಒದಗಿಸುತ್ತಿದೆ ಎಂದು ಇರಾನ್ ದೂರಿದೆ.

ದಾಳಿ ಹೇಗೆ ಆರಂಭಗೊಂಡಿತ್ತು ಎನ್ನುವುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಮಿಲಿಟರಿ ಕಮಾಂಡರ್‌ಗಳು ಮತ್ತು ಹಿರಿಯ ಸರಕಾರಿ ಅಧಿಕಾರಿಗಳು ಕುಳಿತಿದ್ದ ವೇದಿಕೆಯ ಹಿಂಬದಿಯಲ್ಲಿರುವ ಉದ್ಯಾನವನದಿಂದ ಗುಂಡಿನ ದಾಳಿ ಆರಂಭಗೊಂಡಿತ್ತು ಎಂದು ಸರಕಾರಿ ಟಿವಿ ವರದಿಗಾರನೋರ್ವ ತಿಳಿಸಿದ.

ತನ್ಮಧ್ಯೆ,ದಾಳಿಕೋರರು ಐಸಿಸ್ ಉಗ್ರರಾಗಿದ್ದರು ಎಂದು ಸರಕಾರಿ ಟಿವಿಯು ಹೇಳಿದೆ.

ದಾಳಿಗೆ ಗುರಿಯಾದ ಸೈನಿಕರು ರೆವಲ್ಯೂಷನರಿ ಗಾರ್ಡ್‌ಗೆ ಸೇರಿದ್ದು,ಅರೆ ಮಿಲಿಟರಿ ಪಡೆಯಾಗಿರುವ ಇದು ದೇಶದ ಸರ್ವೋಚ್ಚ ನಾಯಕ ಆಯತುಲ್ಲಾ ಅವರ ನೇರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಅರಬ ಪ್ರತ್ಯೇಕತಾವಾದಿ ಗುಂಪೊಂದು ಈ ದಾಳಿಯನ್ನು ನಡೆಸಿದೆ ಎಂದು ಗಾರ್ಡ್ ವಕ್ತಾರ ಜ.ರಮಝಾನ್ ಶರೀಫ್ ಅವರು ಹೇಳಿದರಾದರೂ ಹೆಚ್ಚಿನ ವಿವರಗಳನ್ನು ನೀಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News