ಎಚ್-4 ವೀಸಾದಾರರ ಉದ್ಯೋಗ ಪರವಾನಿಗೆ ರದ್ದು: ಇನ್ನು 3 ತಿಂಗಳಲ್ಲಿ ನಿರ್ಧಾರ

Update: 2018-09-22 15:58 GMT

ವಾಶಿಂಗ್ಟನ್, ಸೆ. 22: ಎಚ್-4 ವೀಸಾದಾರರ ಉದ್ಯೋಗ ಪರವಾನಿಗೆಗಳನ್ನು ರದ್ದುಪಡಿಸುವ ಕುರಿತ ನಿರ್ಧಾರ ಇನ್ನು ಮೂರು ತಿಂಗಳಲ್ಲಿ ಹೊರಬೀಳಬಹುದಾಗಿದೆ ಎಂದು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಶನಿವಾರ ಫೆಡರಲ್ ನ್ಯಾಯಾಲಯವೊಂದಕ್ಕೆ ತಿಳಿಸಿದೆ.

ಎಚ್-1ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ ಎಚ್-4 ವೀಸಾಗಳನ್ನು ನೀಡಲಾಗುತ್ತದೆ ಹಾಗೂ ಅಮೆರಿಕದಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ಕೆಲಸ ಮಾಡುವ ವಿದೇಶಿ ಪರಿಣತರಿಗೆ ಹೆಚ್ಚಾಗಿ ಎಚ್-1ಬಿ ವೀಸಾಗಳನ್ನು ನೀಡಲಾಗುತ್ತದೆ.

ಎಚ್-4 ವೀಸಾಗಳನ್ನು ಹೊಂದಿರುವ ಎಚ್-1ಬಿ ವೀಸಾದಾರರ ಸಂಗಾತಿಗಳು ಅಮೆರಿಕದಲ್ಲಿ ಉದ್ಯೋಗ ಪಡೆಯಲು ಅರ್ಹರು ಎಂಬ ವಿಧಿಯನ್ನು ತೆಗೆದುಹಾಕುವ ನಿಟ್ಟಿನಲ್ಲಿ ಕ್ಷಿಪ್ರ ಪ್ರಗತಿಯನ್ನು ಸಾಧಿಸುತ್ತಿರುವುದಾಗಿ ಆಂತರಿಕ ಭದ್ರತೆ ಇಲಾಖೆ (ಡಿಎಚ್‌ಎಸ್)ಯು ಶನಿವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದೆ.

ನೂತನ ನಿಯಮವನ್ನು ಶ್ವೇತಭವನದ ಬಜೆಟ್ ನಿರ್ವಹಣೆ ಕಚೇರಿಗೆ ಮೂರು ತಿಂಗಳ ಒಳಗೆ ಸಲ್ಲಿಸುವುದಾಗಿ ಎದು ಹೇಳಿದೆ.

ಅಲ್ಲಿವರೆಗೆ, ‘ಸೇವ್ ಜಾಬ್ಸ್ ಯುಎಸ್‌ಎ’ ಹೂಡಿರುವ ಮೊಕದ್ದಮೆಯ ಕುರಿತ ತೀರ್ಪನ್ನು ಅಮಾನತಿನಲ್ಲಿಡುವಂತೆ ಇಲಾಖೆಯು ನ್ಯಾಯಾಲಯವನ್ನು ಒತ್ತಾಯಿಸಿದೆ.

ಎಚ್-4 ವೀಸಾದಾರರು ಅಮೆರಿಕದಲ್ಲಿ ಕೆಲಸ ಮಾಡಲು ಅರ್ಹರು ಎಂಬ ಒಬಾಮ ಆಡಳಿತದ ಅವಧಿಯ ನೀತಿಯಿಂದ ತಮ್ಮ ಉದ್ಯೋಗಗಳಿಗೆ ಕುತ್ತು ಬಂದಿದೆ ಎಂಬುದಾಗಿ ಆರೋಪಿಸಿರುವ ಅಮೆರಿಕನ್ ಉದ್ಯೋಗಿಗಳ ಗುಂಪಾಗಿರುವ ‘ಸೇವ್ ಜಾಬ್ಸ್ ಯುಎಸ್‌ಎ’, ಈ ನೀತಿಯನ್ನು ರದ್ದುಪಡಿಸಬೇಕೆಂದು ಕೋರಿ ನ್ಯಾಯಾಲಯದ ಮೆಟ್ಟಿಲು ಹತ್ತಿದೆ.

ಎಚ್-4 ವೀಸಾದಾರರ ಉದ್ಯೋಗ ಪರವಾನಿಗೆಗಳನ್ನು ರದ್ದುಪಡಿಸಲು ಬಯಸುವುದಾಗಿ ಟ್ರಂಪ್ ಸರಕಾರ ಈಗಾಗಲೇ ಸಾರ್ವಜನಿಕವಾಗಿಯೂ ಹೇಳಿದೆ ಹಾಗೂ ನ್ಯಾಯಾಲಯದಲ್ಲೂ ತಿಳಿಸಿದೆ.

93 ಶೇ. ಭಾರತೀಯರು

ಎಚ್-4 ವೀಸಾದಾರರ ಪೈಕಿ ಹೆಚ್ಚಿನವರು ಭಾರತೀಯ ಅಮೆರಿಕನ್ನರು ಮತ್ತು ಮಹಿಳೆಯರು.

2017 ಡಿಸೆಂಬರ್ 25ರವರೆಗೆ, 1,26,853 ಎಚ್-4 ವೀಸಾದಾರರಿಗೆ ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ಉದ್ಯೋಗ ಪರವಾನಿಗೆಗಳನ್ನು ನೀಡಿದೆ.

ಈ ಪೈಕಿ 93 ಶೇಕಡ ಭಾರತ ಸಂಜಾತರು, 5 ಶೇಕಡ ಚೀನಿಯರು ಹಾಗೂ ಉಳಿದ 2 ಶೇಕಡ ಇತರ ದೇಶಗಳ ಪ್ರಜೆಗಳು. ಈ ಮಾಹಿತಿಯನ್ನು ಅಮೆರಿಕದ ಕಾಂಗ್ರೆಸ್ ಸಂಶೋಧನಾ ಸಂಸ್ಥೆ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News