ಸಿಪಿಇಸಿಗೆ ಸೇರ್ಪಡೆಗೊಳ್ಳಲು ಸೌದಿ ಅರೇಬಿಯ ಒಪ್ಪಿಗೆ: ಪಾಕ್

Update: 2018-09-22 15:59 GMT

ಇಸ್ಲಾಮಾಬಾದ್, ಸೆ. 22: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೆ ಸೇರ್ಪಡೆಗೊಳ್ಳಲು ಹಾಗೂ ಅದರ ಮೂಲಸೌಕರ್ಯ ಮತ್ತು ಕೈಗಾರಿಕಾ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸೌದಿ ಅರೇಬಿಯ ಒಪ್ಪಿದೆ ಎಂದು ಪಾಕಿಸ್ತಾನ ಹೇಳಿದೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇತ್ತೀಚೆಗೆ ಸೌದಿ ಅರೇಬಿಯಕ್ಕೆ ನೀಡಿದ್ದ ಭೇಟಿಯ ವೇಳೆ ಅಲ್ಲಿನ ನಾಯಕತ್ವದೊಂದಿಗೆ ನಡೆಸಿದ ಮಾತುಕತೆಗಳಲ್ಲಿ ಈ ಬಗ್ಗೆ ಒಮ್ಮತಕ್ಕೆ ಬರಲಾಗಿದೆ ಎಂದು ಪಾಕಿಸ್ತಾನದ ವಾರ್ತಾ ಸಚಿವ ಫಾವದ್ ಚೌಧರಿ ತಿಳಿಸಿದರು.

ಇದಕ್ಕೆ ಸಂಬಂಧಿಸಿ ವಿವರಗಳನ್ನು ಸಿದ್ಧಪಡಿಸಲು ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಅಲ್-ಸೌದ್ ಸೂಚನೆಯಂತೆ ಉನ್ನತ ಮಟ್ಟದ ಸಮನ್ವಯ ಸಮಿತಿಯೊಂದನ್ನು ರಚಿಸಲಾಗಿದೆ ಎಂದರು.

ಹಣಕಾಸು ಮತ್ತು ಇಂಧನ ಸಚಿವರು ಸೇರಿದಂತೆ ಉನ್ನತ ಮಟ್ಟದ ನಿಯೋಗವೊಂದನ್ನು ಅಕ್ಟೋಬರ್‌ನಲ್ಲಿ ಪಾಕಿಸ್ತಾನಕ್ಕೆ ಕಳುಹಿಸಲು ಸೌದಿ ಅರೇಬಿಯ ಉದ್ದೇಶಿಸಿದೆ ಎಂದು ಚೌಧರಿ ತಿಳಿಸಿದರು.

ಸಿಪಿಇಸಿ ಎನ್ನುವುದು ಪಾಕಿಸ್ತಾನದ ಗ್ವಾಡರ್ ಬಂದರನ್ನು ಕೇಂದ್ರೀಕರಿಸಿದ 60 ಬಿಲಿಯ ಡಾಲರ್ (ಸುಮಾರು 4.33 ಲಕ್ಷ ಕೋಟಿ ರೂಪಾಯಿ) ವೆಚ್ಚದ ವ್ಯಾಪಾರ ಮತ್ತು ಸಾಗಾಟ ಕಾರಿಡಾರ್ ಆಗಿದೆ. ಇದು ಚೀನಾದ ಮಹತ್ವಾಕಾಂಕ್ಷೆಯ ‘ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್’ನ ಭಾಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News