ಉ. ಪ್ರದೇಶ: ಯಾವುದೇ ಪ್ರಕ್ರಿಯೆ ಇಲ್ಲದೆ ಎಸ್ಸಿ/ಎಸ್ಟಿ ಆಯೋಗಕ್ಕೆ ನೇಮಕ

Update: 2018-09-22 17:04 GMT

ಆರ್ ಟಿಐಯಿಂದ ಬಹಿರಂಗ

ಲಕ್ನೋ, ಸೆ. 22: ನಿವೃತ್ತರಾದ ಬಳಿಕ ಬಿಜೆಪಿ ಸೇರಿರುವ ಉತ್ತರಪ್ರದೇಶದ ಮಾಜಿ ಡಿಜಿಪಿ ಬ್ರಿಜ್ ಲಾಲ್ ಅವರನ್ನು ನಿಯಮ ಗಾಳಿಗೆ ತೂರಿ ಹಾಗೂ ಏಕ ಪಕ್ಷೀಯವಾಗಿ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಆಯೋಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ಎನ್ನುವುದು ಆರ್ ಟಿಐಯಿಂದ ಬಹಿರಂಗವಾಗಿದೆ.

ಲಕ್ನೋ ಮೂಲದ ಸಾಮಾಜಿಕ ಹೋರಾಟಗಾರ ನೂತನ್ ಠಾಕೂರ್ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. 2014ರಲ್ಲಿ ನಿವೃತ್ತರಾದ 1977ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಬ್ರಿಜ್ ಲಾಲ್ ಅವರನ್ನು ಮುಖ್ಯಮಂತ್ರಿ ಆದಿತ್ಯನಾಥ್ ನೇರವಾಗಿ ಆಯೋಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದಾರೆ ಎಂದು ಮನವಿಗೆ ಸಾಮಾಜಿಕ ಕಲ್ಯಾಣ ಇಲಾಖೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಲಾಗಿದೆ. ಆರ್‌ಟಿಐ ಕೋರಿಕೆಯಂತೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಆಯೋಗದ ನೇಮಕಾತಿಯ ಪ್ರಸಕ್ತ ಸ್ಥಿತಿಗತಿ ಬಗ್ಗೆ ವಿವರ ನೀಡುವಂತೆ ಸಾಮಾಜಿಕ ಕಲ್ಯಾಣ ಇಲಾಖೆಯ ಪ್ರಾಥಮಿಕ ಕಾರ್ಯದರ್ಶಿ ಮನೋಜ್ ಸಿಂಗ್ ಅವರಿಗೆ ನಿರ್ದೇಶಿಸಲಾಗಿತ್ತು. ಸಿಂಗ್ ಅವರು ಎಪ್ರಿಲ್ 17ರಂದು ಕಡತ ಸಲ್ಲಿಸಿದ್ದರು. ಈ ಕಡತದ ಪ್ರಕಾರ ಮುಖ್ಯಮಂತ್ರಿ ಆದಿತ್ಯನಾಥ್ ಯಾವುದೇ ಇಲಾಖಾ ಶಿಫಾರಸು ಇಲ್ಲದೆ, ಈ ಸಂಬಂಧ ಯಾವುದೇ ಪ್ರಕ್ರಿಯೆ ನಡೆಸದೆ ಲಾಲ್ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇರವಾಗಿ ನೇಮಕ ಮಾಡಿದ್ದಾರೆ.

ಬ್ರಿಜ್ ಲಾಲ್‌ಗೆ ರಾಜ್ಯ ಸಚಿವರ ಸ್ಥಾನ ಮಾನ ನೀಡುವಂತೆ ಉನ್ನತ ವ್ಯಕ್ತಿಗಳು ಸಾಮಾಜಿಕ ಕಲ್ಯಾಣ ಇಲಾಖೆಗೆ ನಿರ್ದೇಶಿಸಿದ್ದರು. ಇಲಾಖೆಯ ಸಚಿವರ ಶಿಫಾರಸು ಇಲ್ಲದೆ ಎಪ್ರಿಲ್ 20ರಂದು ಪ್ರಸ್ತಾಪ ಸಲ್ಲಿಸಲಾಗಿತ್ತು. ಅದೇ ದಿನ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಅನುಮೋದನೆ ನೀಡಿದ್ದರು. ಪ್ರಮುಖ ಆಡಳಿತಾತ್ಮಕ ನಿರ್ಧಾರಗಳು ಉನ್ನತ ಮಟ್ಟದಿಂದ ರಾಜಕೀಯ ಒತ್ತಡಕ್ಕೆ ಅನುಗುಣವಾಗಿ ಕಾರ್ಯ ರೂಪಕ್ಕೆ ಬರುತ್ತಿದೆ ಎಂದು ಆರ್‌ಟಿಐ ಕಾರ್ಯಕರ್ತ ಠಾಕೂರ್ ಬೇಸರ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News