ಕೇರಳ ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಬಿಷಪ್ ಫ್ರಾಂಕೊ ಸೆ. 24ರವರೆಗೆ ಪೊಲೀಸ್ ಕಸ್ಟಡಿಗೆ

Update: 2018-09-22 17:42 GMT

ಹೊಸದಿಲ್ಲಿ, ಸೆ. 22: ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಬಿಷಪ್ ಫ್ರಾಂಕೊ ಮುಳಕ್ಕಲ್ ಅವರನ್ನು ಶನಿವಾರ ಪಾಲದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೆಪ್ಟಂಬರ್ 24ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

54 ವರ್ಷದ ಬಿಷಪ್ ಅವರನ್ನು ಇಂದು ಬೆಳಗ್ಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ಎದೆ ನೋವಿನ ಹಿನ್ನೆಲೆಯಲ್ಲಿ ಅವರನ್ನು ಕೊಟ್ಟಾಯಂ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು. ಎರ್ನಾಕುಳಂ ಜಿಲ್ಲೆಯ ತಿರುಪ್ಪುನಿತುರದಲ್ಲಿರುವ ಕ್ರೈಮ್ ಬ್ರಾಂಚ್ ಕಚೇರಿಯಿಂದ ಶುಕ್ರವಾರ ರಾತ್ರಿ ಕೊಟ್ಟಾಯಂನಲ್ಲಿರುವ ಪೊಲೀಸ್ ಕ್ಲಬ್‌ಗೆ ಕರೆದೊಯ್ಯುತ್ತಿರುವಾಗ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೊಟ್ಟಾಯಂನ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ವಿಭಾಗದ ತೀವ್ರ ನಿಗಾ ಘಟಕದಲ್ಲಿ ಅವರನ್ನು ದಾಖಲಿಸಲಾಗಿತ್ತು. ಇಸಿಜಿ ಹಾಗೂ ಹೃದಯಕ್ಕೆ ಸಂಬಂಧಿಸಿದ ಎಲ್ಲ ಪರೀಕ್ಷೆಗಳನ್ನು ನಡೆಸಲಾಗಿತ್ತು. ಪ್ರಸ್ತುತ ಅವರ ಪರಿಸ್ಥಿತಿ ಸ್ಥಿರವಾಗಿದೆ. ಮೂರು ದಿನಗಳ ಕಾಲ ವಿಚಾರಣೆ ನಂತರ ಶುಕ್ರವಾರ ರಾತ್ರಿ ಮುಳಕ್ಕಲ್ ಅವರನ್ನು ಬಂಧಿಸಲಾಗಿತ್ತು. ವಿಚಾರಣೆ ಸಂದರ್ಭ ಮುಳಕ್ಕಲ್ ತಾನು ಅತ್ಯಾಚಾರ ಎಸಗಿಲ್ಲ ಎಂಬ ತನ್ನ ಹೇಳಿಕೆಗೆ ಬದ್ದರಾಗಿದ್ದರು.

ಆದರೆ, ಸಾಂದರ್ಭಿಕ ಸಾಕ್ಷ, ಸಾಕ್ಷಿಗಳ ಸಾಕ್ಷ ಹಾಗೂ ಕ್ರೈಸ್ತ ಸನ್ಯಾಸಿನಿಯ ಹೇಳಿಕೆಯ ನಡುವೆ ವಿರೋಧಾಬಾಸ ಕಂಡು ಬಂದ ಹಿನ್ನೆಲೆಯಲ್ಲಿ ಮುಳಕ್ಕಲ್ ಅವರನ್ನು ಬಂಧಿಸಲಾಗಿತ್ತು. 2014 ಮೇ 5ರಿಂದ ಎರಡು ವರ್ಷಗಳ ಕಾಲ ಕೊಟ್ಟಾಯಂ ಜಿಲ್ಲೆಯ ಮಿಷನ್ ಹೌಸ್‌ನಲ್ಲಿ ಮುಳಕ್ಕಲ್ ಅವರನ್ನ ತನ್ನ ಮೇಲೆ 13 ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಜೂನ್‌ನಲ್ಲಿ ಕ್ರೈಸ್ತ ಸನ್ಯಾಸಿನಿ ದೂರು ನೀಡಿದ್ದರು. ದೂರು ನೀಡಿದರೂ ಚರ್ಚ್‌ನ ಆಡಳಿತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ಪೊಲೀಸ್ ಠಾಣೆ ಸಂಪರ್ಕಿಸಿದ್ದರು. ಕೊಟ್ಟಾಯಂ ಪೊಲೀಸರು ಜೂನ್ 28ರಂದು ಪ್ರಕರಣ ದಾಖಲಿಸಿದರು. ತನಿಖೆ ಸುಮಾರು ಮೂರು ತಿಂಗಳುಗಳ ಕಾಲ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News