ಐಸಿಸಿ ನೀತಿ ಸಂಹಿತೆ ಉಲ್ಲಂಘನೆ: ಹಸನ್, ಅಸ್ಘರ್, ರಶೀದ್‌ಗೆ ದಂಡ

Update: 2018-09-22 18:11 GMT

ಅಬುಧಾಬಿ, ಸೆ.22: ಏಶ್ಯಕಪ್‌ನಲ್ಲಿ ಶುಕ್ರವಾರ ಸೂಪರ್-4 ಪಂದ್ಯದ ವೇಳೆ ನಡೆದ ಮೂರು ಪ್ರತ್ಯೇಕ ಘಟನೆಗೆ ಸಂಬಂಧಿಸಿ ಪಾಕಿಸ್ತಾನದ ಆಲ್‌ರೌಂಡರ್ ಹಸನ್ ಅಲಿಯ ಜೊತೆಗೆ ಅಫ್ಘಾನಿಸ್ತಾನದ ಇಬ್ಬರು ಆಟಗಾರರಾದ ಅಸ್ಘರ್ ಅಫ್ಘಾನ್ ಹಾಗೂ ರಶೀದ್ ಖಾನ್‌ಗೆ ಪಂದ್ಯಶುಲ್ಕದಲ್ಲಿ 15 ಶೇ. ದಂಡ ವಿಧಿಸಲಾಗಿದೆ. ಐಸಿಸಿ ನೀತಿ ಸಂಹಿತೆ ಲೆವೆಲ್-1ನ್ನು ಉಲ್ಲಂಘಿಸಿದ ಕಾರಣಕ್ಕೆ ಮೂವರಿಗೆ ತಲಾ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.

37ನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಸಜ್ಜಾಗಿದ್ದ ಪಾಕ್‌ನ ಹಸನ್ ಅಲಿಗೆ ಅಫ್ಘಾನಿಸ್ತಾನದ ನಾಯಕ ಅಸ್ಘರ್ ತನ್ನ ಭುಜವನ್ನು ತಾಗಿಸಿ ಅಸಭ್ಯ ವರ್ತನೆ ತೋರಿದ್ದರು.  ಹಸನ್ ಅಫ್ಘಾನಿಸ್ತಾನ ಇನಿಂಗ್ಸ್‌ನ 33ನೇ ಓವರ್‌ನಲ್ಲಿ ಬೌಲಿಂಗ್‌ನಲ್ಲಿ ಸ್ಟ್ರೈಕರ್‌ನಲ್ಲಿದ್ದ ಅಫ್ಘಾನಿಸ್ತಾನದ ಹಸ್ಮತುಲ್ಲಾ ಶಾಹಿದಿ ಅವರತ್ತ ಚೆಂಡನ್ನು ಎಸೆದು ಬೆದರಿಸಲು ಯತ್ನಿಸಿದ್ದರು.

ಪಾಕಿಸ್ತಾನ ಇನಿಂಗ್ಸ್‌ನ 47ನೇ ಓವರ್‌ನಲ್ಲಿ ಆಸಿಫ್ ಅಲಿ ಅವರನ್ನು ಔಟ್ ಮಾಡಿದ ಬಳಿಕ ಅನುಚಿತವಾಗಿ ವರ್ತಿಸಿದ ಕಾರಣಕ್ಕೆ ರಶೀದ್‌ಗೆ ದಂಡ ವಿಧಿಸಲಾಗಿದೆ. ಹಸನ್ ಹಾಗೂ ರಶೀದ್ ಮೊದಲ ಬಾರಿ ಡಿಮೆರಿಟ್ ಪಾಯಿಂಟ್ ಪಡೆದಿದ್ದಾರೆ. ಅಸ್ಘರ್ 24 ತಿಂಗಳಲ್ಲಿ ಎರಡನೇ ಬಾರಿ ಡಿಮೆರಿಟ್ ಪಾಯಿಂಟ್ ಪಡೆದರು.

ಪಂದ್ಯ ಕೊನೆಗೊಂಡ ಬಳಿಕ ಮೂವರು ಆಟಗಾರರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ದಂಡ ವಿಧಿಸಿದರು. ಆನ್‌ಫೀಲ್ಡ್ ಅಂಪೈರ್‌ಗಳಾದ ಅನಿಲ್ ಚೌಧರಿ ಹಾಗೂ ಶಾನ್ ಜಾರ್ಜ್, ಮೂರನೇ ಅಂಪೈರ್ ರಾಡ್ ಟಕರ್ ಹಾಗೂ ನಾಲ್ಕನೇ ಅಂಪೈರ್ ಅನಿಸ್-ವುರ್ರಹ್ಮಾನ್ ಆಟಗಾರರ ವಿರುದ್ಧ ದೂರು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News