ಜೆಮಿಮಾ ಅರ್ಧಶತಕ: ಭಾರತದ ಮಹಿಳಾ ತಂಡಕ್ಕೆ ಗೆಲುವು

Update: 2018-09-22 18:12 GMT

ಕೊಲಂಬೊ, ಸೆ.22: ಯುವ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಬಿರುಸಿನ ಅರ್ಧಶತಕದ(57,40 ಎಸೆತ)ಸಹಾಯದಿಂದ ಭಾರತದ ಮಹಿಳಾ ಕ್ರಿಕೆಟ್ ತಂಡ ಆತಿಥೇಯ ಶ್ರೀಲಂಕಾ ವಿರುದ್ಧದ 3ನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದುಕೊಂಡಿದೆ.

ಇಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಭಾರತ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ಮಳೆಗಾಹುತಿಯಾಗಿತ್ತು.

ಮೊದಲು ಫೀಲ್ಡಿಂಗ್ ಆಯ್ದುಕೊಂಡ ಭಾರತ ತಂಡ ಶ್ರೀಲಂಕಾವನ್ನು 8 ವಿಕೆಟ್‌ಗಳ ನಷ್ಟಕ್ಕೆ 131 ರನ್‌ಗೆ ನಿಯಂತ್ರಿಸಿತು. ಶಶಿಕಲಾ ಸಿರಿವರ್ಧನೆ(35) ಹಾಗೂ ನೀಲಾಕ್ಷಿ ಡಿಸಿಲ್ವಾ(31)ತಂಡಕ್ಕೆ ಪ್ರಮುಖ ಕಾಣಿಕೆ ನೀಡಿದರು. ಭಾರತದ ಪರ ಮಧ್ಯಮ ವೇಗಿ ಅರುಂಧತಿ ರೆಡ್ಡಿ 4 ಓವರ್‌ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರು. ಗೆಲ್ಲಲು 132 ರನ್ ಗುರಿ ಪಡೆದ ಭಾರತ 18.2 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. ರೊಡ್ರಿಗಸ್ 40 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಿಡಿಸಿ 57 ರನ್ ಗಳಿಸಿದ್ದಲ್ಲದೆ ಹರ್ಮನ್‌ಪ್ರೀತ್(24) ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 53 ರನ್ ಜೊತೆಯಾಟ ನಡೆಸಿದರು.

ಮೊದಲ ಟ್ವೆಂಟಿ-20 ಪಂದ್ಯದಲ್ಲಿ 36 ರನ್ ಗಳಿಸಿದ್ದ ರೊಡ್ರಿಗಸ್ 3ನೇ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದರು. ಹರ್ಮನ್‌ಪ್ರೀತ್ ಹಾಗೂ ರೊಡ್ರಿಗಸ್ ಅವರು ಚಾಮರಿ ಅಟಪಟ್ಟು ಎಸೆದ ಒಂದೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಆಗ ಭಾರತಕ್ಕೆ ಕೇವಲ 19 ರನ್ ಅಗತ್ಯವಿತ್ತು. ವೇದಾ ಕೃಷ್ಣಮೂರ್ತಿ(11)ಹಾಗೂ ಅನುಜಾ ಪಾಟೀಲ್(8)ಯಾವುದೇ ಒತ್ತಡವಿಲ್ಲದೆ ತಂಡವನ್ನು ಗೆಲುವಿನ ದಡ ಸೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News