ರಫೇಲ್ ಡೀಲ್ ಗೆ ಸಂಬಂಧಿಸಿ ಭಾರತದ ಸರಕಾರ ತಪ್ಪು ಹೇಳಿಕೆ ನೀಡುತ್ತಿದೆ

Update: 2018-09-23 07:55 GMT

ಡಸ್ಸಾಲ್ಟ್ ಏವಿಯೇಶನ್ ಮತ್ತು ರಿಲಯನ್ಸ್ ಡಿಫೆನ್ಸ್ ನಡುವಿನ ರಫೇಲ್ ಒಪ್ಪಂದದಲ್ಲಿ ಭಾರತ ಹಾಗೂ ಫ್ರಾನ್ಸ್ ಸರ್ಕಾರಗಳು ಪಾಲ್ಗೊಂಡಿಲ್ಲ ಎಂದು ಭಾರತ ನೀಡಿರುವ ಹೇಳಿಕೆ ತಪ್ಪು ಎಂದು ಫ್ರಾನ್ಸ್‍ನ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡೆ ಅವರನ್ನು ಸಂದರ್ಶಿಸಿದ ಪತ್ರಕರ್ತ ಆಂಟನ್ ರೂಜೆಟ್ ಹೇಳಿದ್ದಾರೆ.

‘ಇಂಡಿಯಾ ಟುಡೇ’ ಟಿವಿ ವಾಹಿನಿಗೆ ವಿಶೇಷ ಸಂದರ್ಶನ ನೀಡಿದ ಆಂಟನ್ ರೂಜೆಟ್ "ಭಾರತ ಸರ್ಕಾರವೇ ರಿಲಯನ್ಸ್ ಡಿಫೆನ್ಸ್ ಹೆಸರನ್ನು ಫ್ರಾನ್ಸ್ ಅಧಿಕಾರಿಗಳಿಗೆ ಪ್ರಸ್ತಾವಿಸಿದ್ದನ್ನು ಸ್ವತಃ ಹೋಲಾಂಡೆಯವರೇ ಸ್ಪಷ್ಟಪಡಿಸಿದ್ದಾರೆ" ಎಂದು ದೃಢಪಡಿಸಿದ್ದಾರೆ.

ಆಂಟನ್ ರೂಜೆಟ್ ಜತೆಗೆ ನಡೆಸಿದ ಇ-ಮೇಲ್ ಸಂದರ್ಶನದ ಸಾರಾಂಶ ಇಲ್ಲಿದೆ

ಇಂಡಿಯಾ ಟುಡೇ: ಫ್ರಾನ್ಸ್ ನ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡೆ ಅವರು ರಫೇಲ್ ಒಪ್ಪಂದ ಮತ್ತು ಅನಿಲ್ ಅಂಬಾನಿಯವರ ರಿಲಯನ್ಸ್ ಡಿಫೆನ್ಸ್ ಗೆ ಸಂಬಂಧಿಸಿದಂತೆ ನಿಮಗೆ ನೀಡಿದ ಸಂದರ್ಶನದಲ್ಲಿ ಏನು ಹೇಳಿದ್ದಾರೆ ಎನ್ನುವುದನ್ನು ಸ್ವಷ್ಟಪಡಿಸಬಹುದೇ?

ರೂಜೆಟ್: ಫ್ರಾನ್ಸ್ ನ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡೆಯವರು ರಫೇಲ್ ಒಪ್ಪಂದಕ್ಕೆ ಡಸ್ಸಾಲ್ಟ್ ಏವಿಯೇಶನ್ ಮತ್ತು ರಿಲಯನ್ಸ್ ಡಿಫೆನ್ಸ್ ಸಹಿ ಮಾಡಿದ ಸಂದರ್ಭದಲ್ಲಿ ಅಧಿಕಾರದಲ್ಲಿದ್ದರು. ಭಾರತ ಸರ್ಕಾರ ರಿಲಯನ್ಸ್ ಡಿಫೆನ್ಸ್‍ನ ಹೆಸರನ್ನು ಫ್ರಾನ್ಸ್ ಅಧಿಕಾರಿಗಳಿಗೆ ಪ್ರಸ್ತಾವಿಸಿದ್ದಾಗಿ ಅವರು ಸ್ಪಷ್ಟವಾಗಿ ಹೇಳಿದ್ದರು.

ಹೊಲಾಂಡೆಯವರ ಸಂಪೂರ್ಣ ಹೇಳಿಕೆ ಹೀಗಿದೆ: "ಈ ವಿಚಾರದಲ್ಲಿ ನಾವು ಹೇಳುವಂಥದ್ದು ಏನೂ ಇಲ್ಲ. ಈ ಸೇವಾ ಗುಂಪನ್ನು ಭಾರತ ಸರ್ಕಾರ ಪ್ರಸ್ತಾವಿಸಿದೆ. ಡಸ್ಸಾಲ್ಟ್ ಏವಿಯೇಶನ್, ಅಂಬಾನಿ ಜತೆ ಮಾತುಕತೆ ನಡೆಸಿದೆ. ನಮಗೆ ಇಲ್ಲಿ ಯಾವ ಆಯ್ಕೆಯೂ ಇಲ್ಲ. ನಮಗೆ ನೀಡಿದ ಸಂವಾದಕರನ್ನು ನಾವು ತೆಗೆದುಕೊಂಡಿದ್ದೇವೆ. ಜ್ಯೂಲಿ ಗಾಯೆಟ್‍ರ ಸಿನಿಮಾ ಜತೆ ಸಂಪರ್ಕ ಹೊಂದಿದೆ ಎನ್ನುವುದನ್ನು ನಾನು ಕಲ್ಪಿಸಿಕೊಂಡಿಲ್ಲ ಕೂಡಾ"

ಇಂಡಿಯಾ ಟುಡೇ: ಫ್ರಾನ್ಸ್ ನ ಮಾಜಿ ಅಧ್ಯಕ್ಷರು, ನಮಗೆ ಯಾವುದೇ ಆಯ್ಕೆ ನೀಡಿಲ್ಲ ಎಂದು ಅಧಿಕೃತವಾಗಿ ನಿಮ್ಮ ಬಳಿ ಹೇಳಿದ್ದಾರೆ. ಜತೆಗೆ ರಿಲಯನ್ಸ್ ಡಿಫೆನ್ಸ್ ನ ಹೆಸರನ್ನು ಭಾರತ ಸರ್ಕಾರ ನೀಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಇದರ ಹಿಂದಿನ ಕಾರಣಗಳ ಬಗ್ಗೆ ನಿಮ್ಮ ಬಳಿ ಹೇಳಿದ್ದಾರೆಯೇ?

ರೂಜೆಟ್: ಭಾರತ ಸರ್ಕಾರದ ಉದ್ದೇಶಗಳ ಬಗ್ಗೆ ಅವರು ನಮಗೇನೂ ಹೇಳಿಲ್ಲ. ಈ ಉದ್ದೇಶಗಳು ಅವರಿಗೆ ತಿಳಿದಿವೆಯೇ ಎನ್ನುವುದೂ ನಮಗೆ ಗೊತ್ತಿಲ್ಲ. ಇನ್ನೊಂದೆಡೆ, ರಫೇಲ್ ಗುತ್ತಿಗೆ ಅತ್ಯಂತ ಮಹತ್ವದ್ದಾಗಿರುವ ಕಾರಣದಿಂದ ಫ್ರಾನ್ಸ್ ಅಧಿಕಾರಿಗಳು ಈ ಮನವಿಯನ್ನು ಸ್ವೀಕರಿಸಿದ್ದಾರೆ.

ಇಂಡಿಯಾ ಟುಡೇ: ಹಿತಾಸಕ್ತಿಯ ಸಂಘರ್ಷದ ಆರೋಪಗಳೂ ಈ ವಿಚಾರದಲ್ಲಿ ಕೇಳಿಬಂದಿವೆ. ಅನಿಲ್ ಅಂಬಾನಿಯವರ ರಿಲಯನ್ಸ್ ಡಿಫೆನ್ಸ್, ಹೊಲಾಂಡೆಯವರ ಪಾಲುದಾರ ಜೂಲಿ ಗಯೆಟ್ ನಿರ್ಮಾಣದ ಫ್ರೆಂಚ್ ಚಲಚಿತ್ರವೊಂದಕ್ಕೆ ಹಣಕಾಸು ನೆರವು ನೀಡಿದೆ ಎಂಬ ಆರೋಪಗಳೂ ಇವೆ. ನಿಮ್ಮ ತನಿಖೆಯಲ್ಲಿ ಈ ಬಗ್ಗೆ ಏನು ತಿಳಿದುಬಂದಿದೆ ಹೇಳಬಲ್ಲಿರಾ?

ರೂಜೆಟ್: ನಾವು ಹಲವು ಅಂಶಗಳನ್ನು ಅನಾವರಣಗೊಳಿಸಿದ್ದೇವೆ. ಈ ಹಣಕಾಸು ನೆರವನ್ನು ರಿಲಯನ್ಸ್ ಡಿಫೆನ್ಸ್ ನೇರವಾಗಿ ಮಾಡಿಲ್ಲ. ಆದರೆ ಅಂಬಾನಿಗೆ 25 ವರ್ಷಗಳಿಂದ ಪರಿಚಯ ಇರುವ ಫ್ರಾನ್ಸ್ ಮೂಲದ ವ್ಯಕ್ತಿಯೊಬ್ಬರು ಮಾಡಿದ್ದಾರೆ. ಚಿತ್ರ ಮುಕ್ತಾಯದ ಹಂತದಲ್ಲಿರುವಾಗ ಅಂದರೆ ಶೂಟಿಂಗ್‍ ನ ಸಮಯದಲ್ಲಿ ಹಣಕಾಸು ನೆರವು ಬಂದಿದೆ. ಅದು ಇಲ್ಲದಿದ್ದರೆ ಚಿತ್ರ ನಿರ್ಮಾಣ ಸಾಧ್ಯವಾಗುತ್ತಿರಲಿಲ್ಲ. ಈ ನಿಧಿಯ ಮೂಲಕ ಚಿತ್ರದ ಒಟ್ಟು ಅಂದಾಜು ವೆಚ್ಚದ ಶೇಕಡ 16ನ್ನು ಅಂದರೆ 16 ಲಕ್ಷ ಯೂರೊ ನೀಡಲಾಗಿದೆ.

ಈ ಚಿತ್ರ ಭಾರತದ ಬಗ್ಗೆ ಏನೂ ಹೇಳುವುದಿಲ್ಲ ಮತ್ತು ನಿಮ್ಮ ದೇಶದಲ್ಲಿ ಹಂಚಿಕೆಯೂ ಆಗಿಲ್ಲ. ಈ ಹಣಕಾಸು ನೆರವು 2015ರ ಕೊನೆಗೆ ನೋಂದಣಿಯಾಗಿದೆ. ಆದರೆ ಫ್ರಾಂಕೊಯಿಸ್ ಹೊಲಾಂಡೆ ಹೊಸದಿಲ್ಲಿಗೆ ಆಗಮಿಸುವ ದಿನ ಅಂದರೆ ಜನವರಿ 25ರಂದು ಘೋಷಣೆ ಮಾಡಲಾಗಿದೆ. ಫ್ರಾಂಕೊಯಿಸ್ ಹೊಲಾಂಡೆ ಮತ್ತು ಜ್ಯೂಲಿ ಗಾರೆಟ್ ನಮಗೆ ಹೇಳಿದಂತೆ, ರಫೇಲ್ ಮಾರಾಟಕ್ಕೆ ಮತ್ತು ಚಿತ್ರಕ್ಕೆ ಹಣ ನೀಡಿರುವುದಕ್ಕೆ ಯಾವ ಸಂಬಂಧವೂ ಇಲ್ಲ.

ಇಂಡಿಯಾ ಟುಡೇ: ಫ್ರಾನ್ಸ್ ನ ಮಾಜಿ ಅಧ್ಯಕ್ಷರ ಜತೆ ಈ ಸಂದರ್ಶನ ಯಾವಾಗ ನಡೆಸಲಾಗಿದೆ?

ರೂಜೆಟ್: ಈ ವಾರ ಎರಡು ಬಾರಿ ಅವರ ಜತೆ ನಾವು ಮಾತನಾಡಿದ್ದೇವೆ.

ಇಂಡಿಯಾ ಟುಡೇ: ಭಾರತದಲ್ಲಿ ಈಗಾಗಲೇ ರಫೇಲ್ ಒಪ್ಪಂದ ಬಿಸಿಬಿಸಿ ರಾಜಕೀಯ ವಿಷಯ. ಫ್ರಾನ್ಸ್ ನಲ್ಲಿ ಈ ಬಗ್ಗೆ ಯಾವ ವಾತಾವರಣ ಇದೆ?

ರೂಜೆಟ್: ಫ್ರಾನ್ಸ್ ನಲ್ಲಿ ಇದೀಗ ವಿವಾದ ಆರಂಭವಾಗಿದೆ. ನಮ್ಮ ಲೇಖನ ಆ ಅವಧಿಯ ಹಲವು ನಿರ್ಧಾರಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಈ ವಿಷಯವನ್ನು ಪರಿಚಯಿಸಲು ನೆರವಾಗಲಿದೆ.

ಇಂಡಿಯಾ ಟುಡೇ: ನಿಮ್ಮ ಅಭಿಪ್ರಾಯದಂತೆ, ಹೊಲಾಂಡೆಯವರ ಹೇಳಿಕೆಯು, ಜ್ಯೂಲಿ ಗಯೆಟ್ ಅವರ  ಚಿತ್ರ ನಿರ್ಮಾಣ ಮತ್ತು ರಿಲಯನ್ಸ್ ಡಿಫೆನ್ಸ್‍ನ ಹೂಡಿಕೆಯ ಕಾರಣದಿಂದ ಹಿತಾಸಕ್ತಿಯ ಸಂಘರ್ಷದ ಆರೋಪದಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಮಾಡಿರುವ ಪ್ರಯತ್ನದಿಂದ ಪ್ರಭಾವಿತವಾಗಿರುವ ಸಾಧ್ಯತೆ ಇದೆಯೇ?

ರೂಜೆಟ್: ತಮಗೆ ರಿಲಯನ್ಸ್ ಡಿಫೆನ್ಸ್ ಗೊತ್ತೇ ಇಲ್ಲ ಮತ್ತು  ಅದನ್ನು ತಮ್ಮ ಮೇಲೆ ಹೇರಲಾಗಿದೆ ಎಂದು ಈ ವಿಷಯದ ಬಗ್ಗೆ ತೀರಾ ಔಪಚಾರಿಕವಾಗಿ ಹೇಳಿದ್ದರು. ಇದು ಹೇಗೆಲ್ಲ ತಿರುಚಲ್ಪಟ್ಟಿದೆ ಎಂದು ಅರ್ಥ ಮಾಡಿಕೊಳ್ಳಬೇಕಾಗಿದೆ.

ಇಂಡಿಯಾ ಟುಡೇ: ವಾಣಿಜ್ಯ ನಿರ್ಧಾರಗಳಲ್ಲಿ ಭಾರತ ಹಾಗೂ ಫ್ರಾನ್ಸ್ ಸರ್ಕಾರಗಳ ಪಾತ್ರ ಇಲ್ಲ ಎನ್ನುವುದನ್ನು ಭಾರತ ಸರ್ಕಾರ ಪುನರುಚ್ಚರಿಸಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ರೂಜೆಟ್: ಈ ವಾದ ಒಪ್ಪುವಂಥದ್ದಲ್ಲ. ರಫೇಲ್‍ ಗಳ ರಫ್ತಿಗೆ ಸಂಬಂಧಿಸಿದಂತೆ ಎಲ್ಲ ಸರ್ಕಾರಗಳೂ ಪಾತ್ರ ವಹಿಸುತ್ತವೆ ಎನ್ನುವುದು ಫ್ರಾನ್ಸ್‍ನಲ್ಲಿ ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಇದು ಇಲ್ಲಿ ಮಹತ್ವದ ವಿಷಯ ಕೂಡಾ. ಇಲ್ಲಿ ಅಧಿಕಾರದಲ್ಲಿದ್ದ ಫ್ರಾಂಕೊಯಿಸ್ ಹೊಲಾಂಡೆ ಸರ್ಕಾರ, ರಫೇಲ್‍ನ ಅತ್ಯುತ್ತಮ ಮಾರಾಟಗಾರರು.

Writer - ಅಂಕಿತ್ ಕುಮಾರ್, indiatoday.in

contributor

Editor - ಅಂಕಿತ್ ಕುಮಾರ್, indiatoday.in

contributor

Similar News