ಈ ಫೋಬಿಯಾಗಳ ಬಗ್ಗೆ ಎಂದಾದರೂ ಕೇಳಿದ್ದೀರಾ....

Update: 2018-09-23 11:56 GMT

ಫೋಬಿಯಾ ಅಥವಾ ಹೆದರಿಕೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಹೈಡ್ರೋಫೋಬಿಯಾ ಹೊಂದಿರುವವರಿಗೆ ರಭಸದಿಂದ ಹರಿಯುತ್ತಿರುವ ನೀರನ್ನು ನೋಡುವುದೇ ಒಂದು ದುಃಸ್ವಪ್ನವಾಗುತ್ತದೆ. ವಿಜ್ಞಾನದ ಪ್ರಕಾರ ವಿಶ್ವಾದ್ಯಂತ ಹಲವಾರು ಫೋಬಿಯಾಗಳಿದ್ದು, ಹೆಚ್ಚಿನವರಿಗೆ ಇವುಗಳ ಬಗ್ಗೆ ತಿಳಿದಿಲ್ಲ. ನೀವು ಎಂದೂ ಕೇಳಿರದ ಅಂತಹ ಕೆಲವು ಫೋಬಿಯಾಗಳ ಕುರಿತು ಮಾಹಿತಿಗಳಿಲ್ಲಿವೆ. ಇವು ವಿವಿಧ ಫೋಬಿಯಾಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನೆರವಾಗುತ್ತವೆ.

►ಸೆಲೆನೊಫೋಬಿಯಾ

ಸೆಲೆನೊಫೋಬಿಯಾ ಹೊಂದಿರುವ ವ್ಯಕ್ತಿಯು ಚಂದ್ರನನ್ನು ಕಂಡರೆ ಹೆದರುತ್ತಾನೆ. ಹುಣ್ಣಿಮೆಯ ದಿನಗಳಂದು ಈ ಹೆದರಿಕೆ ತೀವ್ರಗೊಳ್ಳುತ್ತದೆ ಎನ್ನಲಾಗಿದೆ. ಈ ಫೋಬಿಯಾಕ್ಕೆ,ವಿಶೇಷವಾಗಿ ಬಾಲ್ಯದಲ್ಲಿಯ ಯಾವುದಾದರೂ ಭಯಂಕರ ಅನುಭವ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.

►ಐಸೊಪ್ಟ್ರೊಫೋಬಿಯಾ

ಈ ಫೋಬಿಯಾ ಹೊಂದಿರುವ ವ್ಯಕ್ತಿಗೆ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಲು ಸಾಧ್ಯವಾಗುವುದಿಲ್ಲ. ತಮ್ಮ ಹೆದರಿಕೆಯು ವಿವೇಚನಾರಹಿತ ಎಂದು ಇಂತಹ ವ್ಯಕ್ತಿಗಳಿಗೆ ತಿಳಿದಿದ್ದರೂ ಅವರು ಅನಗತ್ಯ ಉದ್ವೇಗವನ್ನು ಅನುಭವಿಸುತ್ತಿರುತ್ತಾರೆ. ತಮ್ಮ ಪ್ರತಿಬಿಂಬಗಳನ್ನು ನೋಡಿದಾಗ ಅವರಲ್ಲಿ ಕಳವಳದ ಮತ್ತು ಅಳುಕಿನ ಭಾವನೆಗಳು ಉಂಟಾಗುತ್ತವೆ.

►ಒಂಬ್ರೊಫೋಬಿಯಾ

ಈ ಫೋಬಿಯಾ ಹೊಂದಿರುವ ವ್ಯಕ್ತಿಗಳು ಮಳೆಗೆ ಹೆದರಿಕೊಳ್ಳುತ್ತಾರೆ. ತಲ್ಲಣಗಳನ್ನುಂಟು ಮಾಡುವ ಈ ಫೋಬಿಯಾ ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಇಂತಹ ವ್ಯಕ್ತಿಗಳು ಮಳೆಯನ್ನು ನೊಡಿದ ತಕ್ಷಣ ತಲ್ಲಣ ಅಥವಾ ಭೀತಿಯಿಂದ ನರಳುತ್ತಾರೆ.

►ನ್ಯುಮರೊಫೋಬಿಯಾ

ಇದು ವ್ಯಕ್ತಿಯು ಸಂಖ್ಯೆಗಳನ್ನು ನೋಡಿ ಹೆದರಿಕೊಳ್ಳುವ ಸ್ಥಿತಿಯಾಗಿದೆ. ಕೆಲವು ವ್ಯಕ್ತಿಗಳು ನಿರ್ದಿಷ್ಟ ಸಂಖ್ಯೆಗಳಿಗೂ ಹೆದರುತ್ತಾರೆ ಎನ್ನಲಾಗಿದೆ. ಈ ಫೋಬಿಯಾ ಇರುವವರು ವ್ಯಾಸಂಗದ ಸಂದರ್ಭದಲ್ಲಿ ಗಣಿತ ವಿಷಯದಲ್ಲಿ ಸಂಖ್ಯೆಗಳನ್ನು ಎದುರಿಸುವಾಗ ತುಂಬ ಆತಂಕಿತರಾಗಿರುತ್ತಾರೆ.

►ಥಲಸೊಫೋಬಿಯಾ

ಈ ಫೋಬಿಯಾ ಹೊಂದಿರುವವರಿಗೆ ಸಮುದ್ರ ಅಥವಾ ಸಮುದ್ರ ಯಾನದ ಬಗ್ಗೆ ತೀವ್ರ ಮತ್ತು ನಿರಂತರ ಭೀತಿಯು ಕಾಡುತ್ತಿರುತ್ತದೆ. ಅವರಿಗೆ ಸಮುದ್ರಗಳು ಅಥವಾ ಆಳವನ್ನು ಹೊಂದಿರುವ ನದಿ,ಕೆರೆ ಇತ್ಯಾದಿಗಳ ಬಗ್ಗೆ ಹೆದರಿಕೆಯಿರುತ್ತದೆ. ಈ ಫೋಬಿಯಾವನ್ನು ವಿಶಾಲವಾದ ನೀರಿನ ಅಥವಾ ಸಮುದ್ರದ ಅಲೆಗಳ ನಡುವೆ ಯಿರುವ ಮತ್ತು ಭೂಮಿಯಿಂದ ದೂರವಿರುವ ಭೀತಿ ಎಂದು ವ್ಯಾಖ್ಯಾನಿಸಬಹುದು.

►ಅನಪ್ಟಾಫೋಬಿಯಾ

ಇದು ಸುದೀರ್ಘ ಅವಧಿಗೆ ಏಕಾಂಗಿಯಾಗಿರುವುದರ ಕುರಿತ ಹೆದರಿಕೆಯಾಗಿದೆ. ಈ ಫೋಬಿಯಾ ಹೊಂದಿರುವವರು ಸದಾ ಕಾಲ ಅವಿವಾಹಿತರಾಗಿ ಉಳಿಯುವ ಅಥವಾ ತಪ್ಪು ವ್ಯಕ್ತಿಯೊಂದಿಗೆ ವಿವಾಹವಾಗುವ ಹೆದರಿಕೆಯಲ್ಲಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News