ಆನ್‌ಲೈನ್‌ನಲ್ಲೇ ತೆರಿಗೆ ಪಾವತಿ, ಕಟ್ಟಡ ನಕ್ಷೆ ಅನುಮೋದನೆ: ಜ.1ರಿಂದ ಆನ್‌ಲೈನ್ ಸೇವೆ ಕಡ್ಡಾಯ

Update: 2018-09-24 06:30 GMT

ಮಂಗಳೂರು, ಸೆ.24: ಮುಂದಿನ ಜನವರಿ ಒಂದರಿಂದ ನಗರ ಸ್ಥಳೀಯ ಸಂಸ್ಥೆಗಳ ಪೌರ ಸೇವೆಗಳು ಆನ್‌ಲೈನ್‌ನಲ್ಲಿ ದೊರೆಯಲಿದ್ದು, ಆಸ್ತಿ ತೆರಿಗೆ, ಖಾತಾವನ್ನು ಆನ್‌ಲೈನ್‌ನಲ್ಲಿಯೇ ಪಡೆಯಬಹುದಾಗಿದೆ. ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ, ವಹಿ-ನಕಲು (ಖಾತಾ) ಕಟ್ಟಡ ನಕ್ಷೆ ಅನುಮೋದನೆ, ನೀರು ಹಾಗೂ ವಿದ್ಯುತ್ ಸಂಪರ್ಕ, ರಸ್ತೆ ತುಂಡರಿಸಲು ಅನುಮತಿ ಸೇರಿದಂತೆ ಪೌರ ಸೇವೆಗಳನ್ನು 2019ರ ಜನವರಿ 1ರಿಂದ ಆನ್‌ಲೈನ್ ಮೂಲಕವೇ ಒದಗಿಸುವುದನ್ನು ಸರಕಾರ ಕಡ್ಡಾಯಗೊಳಿಸಿ ಆದೇಶಿಸಿದೆ.

ಇದರಂತೆ ಮಂಗಳೂರು ಮಹಾನಗರ ಪಾಲಿಕೆ, ಉಳ್ಳಾಲ ನಗರಸಭೆ, ಮುಲ್ಕಿ, ಮೂಡುಬಿದಿರೆ ಪುರಸಭೆ, ಬಂಟ್ವಾಳ ಪುರಸಭೆ, ಬೆಳ್ತಂಗಡಿ, ಸುಳ್ಯ ಪಟ್ಟಣ ಪಂಚಾಯತ್‌ನಲ್ಲಿ ಈ ಸೇವೆ ಮುಂದಿನ ವರ್ಷದ ಆರಂಭದಲ್ಲಿ ದೊರೆಯಲಿದೆ. ಇದರ ಜತೆಗೆ ಕರ್ನಾಟಕ ಮುನ್ಸಿಪಲ್ ಡೇಟಾ ಸೊಸೈಟಿ ಮುಖಾಂತರ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಟ್ಟಡ ಪರವಾನಿಗೆ ಹಾಗೂ ಲೇಔಟ್ ಅನುಮೋದನಾ ವ್ಯವಸ್ಥೆ ತಂತ್ರಾಂಶವನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಅಗತ್ಯವಿರುವಲ್ಲಿ ಗ್ರಾಹಕೀಕರಣ (ಕಸ್ಟಮೈಸೇಶನ್)ಮಾಡಿ ಬಳಸುವಂತೆಯೂ ಸರಕಾರ ಅನುಮತಿ ನೀಡಿದೆ. ನಾಗರಿಕರಿಗೆ ಪೌರ ನಾಗರಿಕ ಸೇವೆಗಳನ್ನು ಸುಲಭವಾಗಿ ಒದಗಿಸಲು ಸ್ವಯಂಚಾಲಿತ ಆನ್‌ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಇದರ ಬಳಕೆಯನ್ನು ಕಡ್ಡಾಯಗೊಳಿಸುವ ಬಗ್ಗೆ 2018-19ರ ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಇದರಂತೆ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ.

ಸದ್ಯ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಕೇಬಲ್ ಕೊಳವೆ, ಒಎ್ಸಿ ಮುಂತಾದ ಜಾಲಗಳನ್ನು ರಸ್ತೆ ಅಗೆಯುವ ಮೂಲಕ ಹಾಕುವುದಾದರೆ ಸಂಬಂಧಪಟ್ಟವರು ಪಾಲಿಕೆ/ಸ್ಥಳೀಯ ಸಂಸ್ಥೆಗೆ ಅರ್ಜಿ ಹಾಕಬೇಕು. ನಿಗದಿತ ಮೊತ್ತ ಪಾವತಿಸಬೇಕು. ಕಾಮಗಾರಿಯಾದ ಬಳಿಕ ಅಗೆದ ರಸ್ತೆಯನ್ನು ಸರಿಪಡಿಬೇಕು ಎಂಬ ನಿಯಮವಿದೆ. ಆದರೆ, ಇದಾವುದೂ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ನಗರದ ಯಾವ ಭಾಗದಲ್ಲಿ ಯಾರು ರಸ್ತೆ ಅಗೆಯುತ್ತಾರೆ? ಯಾಕೆ ಅಗೆಯುತ್ತಾರೆ? ಮುಚ್ಚುವವರು ಯಾರು? ಹೀಗೆ ಯಾವ ಮಾಹಿತಿಯೂ ಇರುವುದಿಲ್ಲ. ಆದರೆ, ಆನ್‌ಲೈನ್ ವ್ಯವಸ್ಥೆ ಜಾರಿಯಾದ ಬಳಿಕ ಇದಕ್ಕೆ ಕಡಿವಾಣ ಬೀಳುವ ಸಾಧ್ಯತೆಯಿದೆ.


ಜನಸ್ನೇಹಿಯಾಗಲಿದೆ ಮನಪಾ

‘‘ನೀರಿನ ಬಿಲ್ ಅನ್ನು ಆನ್‌ಲೈನ್ ಮೂಲಕ ಪಾವತಿಸಲು ಈಗಾಗಲೇ ಸಿದ್ಧತೆಯನ್ನು ನಡೆಸಲಾಗಿದೆ. ಇದೀಗ ತುಮಕೂರು ನಗರ ಪಾಲಿಕೆ ಮಾದರಿಯಲ್ಲಿ ಇತರ ಪೌರ ಸೇವೆಗಳನ್ನು ಕೂಡಾ ಆನ್‌ಲೈನ್ ಮೂಲಕ ಒದಗಿಸಲು ತಯಾರಿ ನಡೆಸಲಾಗುತ್ತಿದೆ. ಇದಕ್ಕಾಗಿ ಮಂಗಳೂರಿನ ಎಲ್ಲಾ ಆಸ್ತಿ, ವಸತಿ ಸೇರಿದಂತೆ ದಾಖಲೆಗಳನ್ನು ಸಂಗ್ರಹಿಸಿಡುವ ಕಾರ್ಯ ಪಾಲಿಕೆಯಲ್ಲಿ ನಡೆಸಲಾಗುತ್ತಿದೆ. ಪಾಲಿಕೆಯಲ್ಲಿ ಈ ಬಗ್ಗೆ ಅನುಮತಿಯನ್ನು ಪಡೆದುಕೊಂಡು ಮುಂದಿನ ಜನವರಿಯಿಂದ ಮಂಗಳೂರು ಮಹಾನಗರ ಪಾಲಿಕೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. 

-ನವೀನ್ ಡಿಸೋಜ, ಸ್ಥಾಯಿ ಸಮಿತಿಯ ಅಧ್ಯಕ್ಷರು, ಮನಪಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News