ಬಂಡವಾಳಶಾಹಿಗಳ ರಕ್ಷಣೆಗಾಗಿ ಬ್ಯಾಂಕ್ ವಿಲೀನ: ಮಾಜಿ ಸಚಿವ ರೈ ಆರೋಪ

Update: 2018-09-24 08:04 GMT

ಮಂಗಳೂರು, ಸೆ.24: ಕೇಂದ್ರ ಸರಕಾರವು ಶ್ರೀಮಂತ ಬಂಡವಾಳಶಾಹಿಗಳ ರಕ್ಷಣೆಗಾಗಿ ಕರಾವಳಿಯ ಆರ್ಥಿಕ ಜೀವನಾಡಿಯಾದ ಲಾಭದಲ್ಲಿರುವ ವಿಜಯ ಬ್ಯಾಂಕ್‌ನ್ನು ನಷ್ಟದಲ್ಲಿರುವ ದೇನಾ ಮತ್ತು ಬರೋಡಾ ಬ್ಯಾಂಕ್ ಜತೆ ವಿಲೀನ ಮಾಡಲು ಹೊರಟಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದರು.

87 ವರ್ಷಗಳ ಇತಿಹಾಸವಿರುವ ವಿಜಯ ಬ್ಯಾಂಕ್‌ಗೆ ತನ್ನದೇ ಆದ ಪರಂಪರೆ ಇದೆ. ಒಂದೊಮ್ಮೆ ನಷ್ಟದಲ್ಲಿದ್ದಾಗ ಸಿಬ್ಬಂದಿ ಸಂಬಳ ಪಡೆಯದೆ ಬ್ಯಾಂಕನ್ನು ರಕ್ಷಿಸಿದ ಇತಿಹಾಸವಿದೆ. ಅಂಥ ಬ್ಯಾಂಕಿನ ಕತ್ತು ಹಿಸುಕುವುದು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಅವರು ಹೇಳಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿ ಬಡವರ್ಗಕ್ಕೂ ಸಾಲ ಸಿಗುವಂತೆ ಮಾಡಿದ್ದರು. ಖಾತೆಯಲ್ಲಿ ಹಣ ಇಲ್ಲದಿದ್ದರೂ ಸಮಸ್ಯೆ ಇರಲಿಲ್ಲ. ಈಗಿನ ಎನ್‌ಡಿಎ ಸರಕಾರದಲ್ಲಿ ಖಾತೆಯಲ್ಲಿ ಎರಡು ಸಾವಿರ ರೂ. ಕನಿಷ್ಠ ಮೊತ್ತ ಇರಬೇಕು. ಇಲ್ಲದಿದ್ದರೆ ದಂಡ ಹಾಕುವ ಮೂಲಕ ಶ್ರೀಮಂತರ ಹಿತ ಕಾಯುವ ತನ್ನ ಸೈದ್ಧಾಂತಿಕ ನಿಲುವು ಪ್ರದರ್ಶಿಸುತ್ತಿದೆ. ಯುಪಿಎ ಸರಕಾರ ರೈತರ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದರೆ, ಎನ್‌ಡಿಎ ಸರಕಾರ ಕೈಗಾರಿಕೋದ್ಯಮಿಗಳ ಎರಡು ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿ ಬಂಡವಾಳಶಾಹಿಗಳಿಗೆ ಲಾಭ ಮಾಡಿದೆ ಎಂದರು.

ಬ್ಯಾಂಕ್‌ಗಳ ವಿಲೀನದಿಂದ ಯಾರಿಗೂ ಲಾಭವಿಲ್ಲ. ಬ್ಯಾಂಕಿನ ಸಿಬ್ಬಂದಿ ಮತ್ತು ಗ್ರಾಹಕ ಇಬ್ಬರೂ ಮಾನಸಿಕ ಸಮಸ್ಯೆ ಎದುರಿಸುತ್ತಾರೆ. ಇದನ್ನು ಈಗಾಗಲೇ ಪಂಜಾಬ್ ನ್ಯಾಷನಲ್ ಬ್ಯಾಂಕ್, ಎಸ್‌ಬಿಐಗಳ ವಿಲೀನದಿಂದ ಕಂಡಿದ್ದೇವೆ. ಎ.ಬಿ.ಶೆಟ್ಟಿ ಸ್ಥಾಪಿಸಿದ್ದ ಬ್ಯಾಂಕ್‌ನಲ್ಲಿ ಜಿಲ್ಲೆಯ ಹಲವರಿಗೆ ಉದ್ಯೋಗ ಕಲ್ಪಿಸಿದ್ದರು. ಹೀಗಿದ್ದರೂ ವಿಲೀನ ವಿರುದ್ಧ ಬಿಜೆಪಿಯ ಸಂಸದರು, ಶಾಸಕರು ವೌನವಾಗಿರುವುದು ದುಃಖದ ವಿಚಾರ. ಅವರಿಗೆ ಇದರಿಂದ ಓಟು ಸಿಗುವುದಿಲ್ಲ, ಕೋಮು ಭಾವನೆ ಕೆರಳಿಸಿದರೆ ಮಾತ್ರ ಮತ ಸಿಗುತ್ತದೆ ಎಂದು ಖಾತ್ರಿಯಾಗಿದೆ ಎಂದು ರೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮೇಯರ್ ಭಾಸ್ಕರ ಕೆ., ಮುಖಂಡರಾದ ಮಮತಾ ಗಟ್ಟಿ, ಬೇಬಿ ಕುಂದರ್, ವಿಶ್ವಾಸ್ ಕುಮಾರ್ ದಾಸ್, ಆರ್.ಕೆ.ಪೃಥ್ವಿರಾಜ್, ಸದಾಶಿವ ಉಳ್ಳಾಲ್, ಶಶಿಧರ ಹೆಗ್ಡೆ, ಕವಿತಾ ಸನಿಲ್, ಅಪ್ಪಿ, ನಝೀರ್ ಬಜಾಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News