ಸುಳ್ಯದಲ್ಲಿ ಈದ್ ಸೌಹಾರ್ದ ಕೂಟ

Update: 2018-09-24 08:50 GMT

ಸುಳ್ಯ, ಸೆ.24: ಜಮಾಅತೆ ಇಸ್ಲಾಮೀ ಹಿಂದ್ ಸುಳ್ಯ ಘಟಕದ ಆಶ್ರಯದಲ್ಲಿ ಈದ್ ಸೌಹಾರ್ದ ಕೂಟವು ರವಿವಾರ ಸುಳ್ಯದ ಶಿವಕೃಪಾ ಸಭಾಂಗಣದಲ್ಲಿ ಜರುಗಿತು.
 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ಸ್ ಮಾಜಿ ರಾಜ್ಯಪಾಲ ಎಂ.ಬಿ.ಸದಾಶಿವ, ಸುಳ್ಯ ಸಂತ ಬ್ರಿಜಿಡ್ಸ್ ಚರ್ಚಿನ ಧರ್ಮಗುರು ಫಾ.ವಿನ್ಸೆಂಟ್‌ಡಿಸೋಜ, ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ, ಸುದ್ದಿ ಬಿಡುಗಡೆ ಪತ್ರಿಕೆಯ ಮುಖ್ಯ ವರದಿಗಾರ ಹರೀಶ್ ಬಂಟ್ವಾಳ್ ಹಾಗೂ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಸ್‌ಎನ್.ಶೆಟ್ಟರ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಶಾಂತಿಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಮಾತನಾಡಿ, ಧರ್ಮಗಳ, ಸಂತರ ಚಿಂತನೆಗಳ ಕಾರಣದಿಂದ ಎಲ್ಲೂ ಕೋಮು ಗಲಭೆಗಳಾದ ಚರಿತ್ರೆ ಇಲ್ಲ. ಧರ್ಮವು ಸಮಾಜಕ್ಕೆ ಎಂದೂ ಸಮಸ್ಯೆಯಾಗಿಲ್ಲ. ಆದರೆ ಧರ್ಮದಂತೆ ನಡೆಯುವ ಬದಲು ಧರ್ಮ ರಕ್ಷಣೆಯ ಕರೆ ನೀಡುವವರು ನಮ್ಮ ಸಮಾಜದ ದುರಂತವಾಗಿದ್ದಾರೆ ಎಂದರು.
ವಿಭಜನೆಯ ಸಿದ್ಧಾಂತವನ್ನು ಸೋಲಿಸುವ ಸಲುವಾಗಿ ಈ ರೀತಿ ನಾವು ಪರಸ್ಪರ ಒಟ್ಟುಗೂಡುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವ ಅವಶ್ಯಕತೆಯಿದೆ ಎಂದವರು ಅಭಿಪ್ರಾಯಿಸಿದರು.
ವೇದಿಕೆಯಲ್ಲಿ ಜ.ಇ.ಹಿಂದ್ ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್ ಉಪಸ್ಥಿತರಿದ್ದರು.

 ಕಾರ್ಯಕ್ರಮದ ಕೊನೆಯಲ್ಲಿ ಕೊಡಗು ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಮರಣ ಹೊಂದಿದವರಿಗಾಗಿ ಒಂದು ನಿಮಿಷದ ಮೌನ ಪ್ರಾರ್ಥನೆ ನಡೆಯಿತು. ಫಾಝಿಲ್ ಕಿರಾಅತ್ ಪಠಿಸಿದರು. ಉಸ್ಮಾನ್ ಎಸ್.ಎಂ. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಅಶ್ರಫ್ ಸುಳ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News