ಮಾಣಿಲ: ಸಾರ್ವಜನಿಕ ಜಾಗದ ಸಂಚಾರಕ್ಕೆ ಅಡ್ಡಿ ಆರೋಪ; ದಲಿತ್ ಸೇವಾ ಸಮಿತಿ ಧರಣಿ

Update: 2018-09-24 11:48 GMT

ಬಂಟ್ವಾಳ, ಸೆ. 24: ಮಾಣಿಲ ಗ್ರಾಮದ ಕೂಟೇಲು-ಕನ್ನಡಗುಳಿ-ಕೊಮ್ಮುಂಜೆ ಪ್ರದೇಶಗಳನ್ನು ಸಂಪರ್ಕ ಕಲ್ಪಿಸುವ ರಸ್ತೆಯೂ ಕಂದಾಯ ಇಲಾಖೆಯ ಪ್ರಕಾರ ಸರಕಾರಿ ಜಾಗವಾಗಿದೆ. ಆದರೆ ಈ ಜಾಗ ವರ್ಗದಲ್ಲಿದೆ ಎಂದು ಹೇಳಿಕೊಂಡು ಸಂಚಾರಕ್ಕೆ ಅಡ್ಡಿಪಡಿಸುವ ಖಾಸಗಿ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಮಾಣಿಲ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ದಲಿತ್ ಸೇವಾ ಸಮಿತಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಮಾಣಿಲ ಗ್ರಾಮ ಪಂಚಾಯತ್‍ಗೆ ಮೆರವಣಿಗೆ ಮೂಲಕ ಆಗಮಿಸಿ ಖಾಸಗಿ ವ್ಯಕ್ತಿ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ. ಕೆ. ಸೇಸಪ್ಪ ಬೆದ್ರಕಾಡು ಅವರು, ಒದು ಸರಕಾರಿ ಜಾಗ ಎಂಬುದರ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಆದರೆ, ಇಲ್ಲಿಯ ಖಾಸಗಿ ವ್ಯಕ್ತಿ ಅದು ನನ್ನ ವರ್ಗ ಜಾಗ ಎಂದು ಹೇಳಿಕೊಂಡು ನ್ಯಾಯಾಲಯ, ಗ್ರಾಮ ಪಂಚಾಯತ್ ಹಾಗೂ ಗ್ರಾಮಸ್ಥರನ್ನು ವಂಚನೆ ಮಾಡುತ್ತಿದ್ದಾರೆ. ದಲಿತ್ ಸೇವಾ ಸಮಿತಿ ದಾಖಲೆ ಇಲ್ಲದೇ ಯಾವುದೇ ಪ್ರತಿಭಟನೆ ಮಾಡಲ್ಲ. ಈ ಬಗ್ಗೆ ಸಮರ್ಪಕ ದಾಖಲೆಗಳನ್ನು ಪಡೆದುಕೊಂಡು ಹೋರಾಟಕ್ಕೆ ಇಳಿದಿದ್ದೇವೆ. ಈ ರಸ್ತೆ ಹಲವು ಮನೆಗಳನ್ನು ಸಂಪರ್ಕ ಕಲ್ಪಿಸುತ್ತದೆ. ಇದೀಗ ಅಡ್ಡಿಪಡಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ಸರಕಾರಿ ಜಾಗವನ್ನು ಒತ್ತುವರಿ ಮಾಡುವುದು ಕಾನೂನು ಬಾಹಿರವಾಗಿದೆ. ತಕ್ಷಣವೇ ಒತ್ತುವರಿ ಮಾಡುತ್ತಿರುವ ಖಾಸಗಿ ವ್ಯಕ್ತಿ ವಿರುದ್ಧ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಪ್ರಕರಣ ದಾಖಲಿಸಿ, ಬಂಧಿಸಲು ಕ್ರಮ ಜರಗಿಸಬೇಕೆಂದು ಅವರು ಒತ್ತಾಯಿಸಿದರು. 

ಈ ಸಂದರ್ಭ ಆಗಮಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು ಅಭಿವೃದ್ಧಿ ಅಧಿಕಾರಿ ಅಶೋಕ್, ಗ್ರಾಮ ಕರಣಿಕ ಪ್ರಶಾಂತ್, ಹಾಗೂ ವಿಟ್ಲ ಎಸ್ಸೈ ಯಲ್ಲಪ್ಪ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು. 

ಈ ಸಂದರ್ಭ ಮಾತನಾಡಿದ ಪಂಚಾಯತ್ ಅಧ್ಯಕ್ಷ, ಈ ರಸ್ತೆ ಸರಕಾರಿ ಜಾಗ, ಸಾರ್ವಜನಿಕ ರಸ್ತೆಯಾಗಿದೆ ಎಂಬುದರ ಬಗ್ಗೆ ತಹಶೀಲ್ದಾರರಿಂದ ಖಾತ್ರಿಪಡಿಸಿದ ಆದೇಶ ಪ್ರತಿ ಗ್ರಾಮ ಪಂಚಾಯತ್‍ಗೆ ನೀಡಿದ ಬಳಿಕ ಪರಿಶೀಲಿಸಿ, ಅರ್ಜಿದಾರರ ಮನವಿ ಮೇರೆಗೆ ಅಡ್ಡಿಪಡಿಸಿದ ವ್ಯಕ್ತಿಯ ಮೇಲೆ ಮುಂದಿನ ಕ್ರಮ ಜರುಗಿಸುತ್ತೇವೆ ಹಾಗೂ ಮುಂದಿನ ದಿನದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. 

ದಲಿತ್ ಸೇವಾ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ರಾಜು ಹೊಸ್ಮಠ, ಜಿಲ್ಲಾ ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪ್ರೇಮ ದಡ್ಡಲ್ತಡ್ಕ, ಗೌರವ ಸಲಹೆಗಾರ ಮೋಹನದಾಸ ಯು, ಪ್ರಸಾದ್ ಬೊಳ್ಮಾರ್, ಸಂಕಪ್ಪ ನೆಲ್ಲಿಗುಡ್ಡೆ, ರವಿ ಪುಣಚ, ನಾರಾಯಣ ಭಟ್ ಕನ್ನಡಗುಳಿ, ಮುದ್ದ ಮುಗೇರ ಮಾಣಿಲ, ಮಹಮ್ಮದ್ ಕೂಟೇಲು, ಗಣೇಶ್ ಕನ್ನಡಗುಳಿ, ರಾಮ್ ಭಟ್ ಕೂಟೇಲು, ವಸಂತ ಕೇಪು ಮೊದಲದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News