ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ: 8 ಮಂದಿ ಮೃತ್ಯು

Update: 2018-09-24 13:45 GMT

ಶಿಮ್ಲ, ಸೆ.24: ಹಿಮಾಚಲಪ್ರದೇಶದಲ್ಲಿ ಸತತ ಮೂರನೇ ದಿನವಾದ ಸೋಮವಾರವೂ ಭಾರೀ ಮಳೆಯಾಗುತ್ತಿದ್ದು ಹಲವೆಡೆ ಭೂಕುಸಿತ ಸಂಭವಿಸಿದೆ. ಇದುವರೆಗೆ 8 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ . ಹೆದ್ದಾರಿ ಮತ್ತು ಸಂಪರ್ಕ ರಸ್ತೆಗಳ ಮೇಲೆ ಮಣ್ಣುಕುಸಿದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಪ್ರಮುಖ ನದಿಗಳಲ್ಲಿ ಪ್ರವಾಹದ ಸ್ಥಿತಿಯಿದ್ದು ಕುಲುವಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಗ್ರಾ ಜಿಲ್ಲೆಯ ಲಸ್ಕ್ವಾರಾ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ತಿಲಕ್‌ರಾಜ್ ಎಂಬಾತ ಹಳ್ಳವೊಂದನ್ನು ದಾಟುವ ಪ್ರಯತ್ನದಲ್ಲಿ ನೀರಿನಲ್ಲಿ ಕೊಚ್ಚಿಹೋಗಿದ್ದು ಈತ ಮೃತಪಟ್ಟಿರುವ ಶಂಕೆಯಿದೆ. ಚಂಡೀಗಢ-ಮನಾಲಿ ಹೆದ್ದಾರಿಯಲ್ಲಿ ಹಾಗೂ ಪಠಾಣ್‌ಕೋಟ್-ಚಂಬಾ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದು ರಸ್ತೆ ಸಂಚಾರಕ್ಕೆ ತಡೆಯಾಗಿದೆ. ಆದರೆ ಯಾವುದೇ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ. ನಿರಂತರ ಮಳೆಯಿಂದ ಪ್ರಮುಖ ನದಿಗಳು ಹಾಗೂ ಉಪನದಿಗಳು ತುಂಬಿ ಹರಿದು ರಸ್ತೆಗಳು ಜಲಾವೃತಗೊಂಡಿವೆ. ಇದರಿಂದ ಶಿಮ್ಲಾ ಜಿಲ್ಲೆ ಹಾಗೂ ಕಿನ್ನೌರ್ ಜಿಲ್ಲೆಯ ನಡುವಿನ ಸಂಪರ್ಕ ಕಡಿದು ಹೋಗಿದೆ.

ಕಳೆದ 24 ಗಂಟೆಗಳಲ್ಲಿ (ಸೋಮವಾರ ಬೆಳಿಗ್ಗಿನ 8:30ರವರೆಗೆ ) ಚಂಬಾ ಜಿಲ್ಲೆಯ ಡಾಲ್‌ಹೌಸಿ ನಗರದಲ್ಲಿ 170 ಮಿ.ಮೀ., ಚಂಬಾದಲ್ಲಿ 117 ಮಿ.ಮೀ, ಮನಾಲಿಯಲ್ಲಿ 121 ಮಿ.ಮೀ, ಕಾಂಗ್ರದಲ್ಲಿ 120.8 ಮಿ.ಮೀ, ಪಲಂಪೂರ್‌ನಲ್ಲಿ 108 ಮಿ.ಮೀ, ಧರ್ಮಶಾಲಾದಲ್ಲಿ 62.6 ಮಿ.ಮೀ, ಊನಾದಲ್ಲಿ 62 ಮಿ.ಮೀ., ಶಿಮ್ಲಾದಲ್ಲಿ 23.1 ಮಿ.ಮೀ. ಮಳೆಯಾಗಿದೆ. ಕುಲುವಿನಲ್ಲಿ ಹೈ ಅಲರ್ಟ್ ಘೋಷಿಸಿರುವ ಜಿಲ್ಲಾಧಿಕಾರಿ, ನದಿ, ಕೊಳ್ಳದ ಸಮೀಪಕ್ಕೆ ತೆರಳದಂತೆ ಜನತೆಗೆ ಎಚ್ಚರಿಕೆ ನೀಡಿದ್ದಾರೆ. ಭಾರೀ ಮಳೆ ಹಾಗೂ ಹಿಮಪಾತದಿಂದ ರಾಜ್ಯದ ತಾಪಮಾನದಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು ಕೀಲಾಂಗ್‌ನಲ್ಲಿ ಮೈನಸ್ 0.2 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮನಾಲಿ- ಲೇಹ್ ನಡುವಿನ ಹೆದ್ದಾರಿಯಲ್ಲಿ ಹಿಮಪಾತದ ಕಾರಣ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಚಂಬಾ, ಕುಲು, ಸಿರ್‌ಮಾರ್, ಕಾಂಗ್ರ, ಹಾಮಿರ್‌ಪುರ ಜಿಲ್ಲೆಗಳಲ್ಲಿ ಸೆ. 25ರವರೆಗೆ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ. ಕುಲು ಜಿಲ್ಲೆಯ ದೋಬಿ ಎಂಬಲ್ಲಿ ದಿಢೀರ್ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ 19 ಮಂದಿಯನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ರಕ್ಷಿಸಿದೆ. ಸಟ್ಲೇಜ್, ಬಿಯಾಸ್ ಮತ್ತು ಯಮುನಾ ನದಿಗಳು ಮತ್ತದರ ಉಪನದಿಗಳಲ್ಲಿ ಪ್ರವಾಹ ಸ್ಥಿತಿಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆ.25ರಂದೂ ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News