ಲಂಚ ಸ್ವೀಕರಿಸಿದ್ದ ವಾಯುಪಡೆ ಅಧಿಕಾರಿ ಸಿಬಿಐ ಬಲೆಯಲ್ಲಿ

Update: 2018-09-24 14:00 GMT
ಸಾಂದರ್ಭಿಕ ಚಿತ್ರ

ಅಹ್ಮದಾಬಾದ್,ಸೆ.24: ಗುತ್ತಿಗೆಯೊಂದಕ್ಕೆ ಸಂಬಂಧಿಸಿದಂತೆ ಮುಂಬೈನ ಸಂಸ್ಥೆಯೊಂದರಿಂದ ಲಂಚ ಸ್ವೀಕರಿಸಿದ ಆರೋಪದಲ್ಲಿ ಗುಜರಾತಿನ ಜಾಮನಗರದಲ್ಲಿಯ ಭಾರತೀಯ ವಾಯುಪಡೆಯ ನಿಲ್ದಾಣದಲ್ಲಿ ಸಹಾಯಕ ಲೆಕ್ಕಪತ್ರ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಂಕಜ ಕುಮಾರ್ ಎನ್ನುವವರನ್ನು ಸಿಬಿಐನ ಭ್ರಷ್ಟಾಷಾರ ನಿಗ್ರಹ ಘಟಕವು ಬಂಧಿಸಿದೆ.

ಮುಂಬೈ ಮೂಲದ ಜೆಎಂಇ ಸರ್ವಿಸಿಸ್ ಪ್ರೈ.ಲಿ.ಸಂಸ್ಥೆಯು ಕಛ್‌ನ ನಾಲಿಯಾ ವಾಯುಪಡೆ ನಿಲ್ದಾಣದಲ್ಲಿ ಕಾಮಗಾರಿಯೊಂದಕ್ಕೆ ಅರ್ಥ್‌ಮೂವರ್‌ಗಳು,ಟ್ರಾಕ್ಟರ್‌ಗಳು ಮತ್ತು ಕಾರ್ಮಿಕರನ್ನು ಒದಗಿಸುವ 98 ಲ.ರೂ.ಗಳ ಗುತ್ತಿಗೆಯನ್ನು ಪಡೆಯಲು ಉದ್ದೇಶಿಸಿತ್ತು. ಅದು ಗುತ್ತಿಗೆಯನ್ನು ಪಡೆದುಕೊಳ್ಳಲು ನೆರವಾಗುವುದಕ್ಕಾಗಿ ಕುಮಾರ್ ಎರಡು ಲ.ರೂ.ಗಳ ಲಂಚದ ಬೇಡಿಕೆಯನ್ನು ಮುಂದುವರಿಸಿದ್ದರು. ಚೌಕಾಸಿಯ ಬಳಿಕ ಈ ಮೊತ್ತ 1.25ಲ.ರೂ.ಗೆ ಇಳಿದಿತ್ತು. ಸಂಸ್ಥೆಯು ಮೊದಲ ಕಂತಾಗಿ 80,000 ರೂ.ಗಳ ಲಂಚವನ್ನು ಗುರುವಾರ ಕುಮಾರ್‌ಗೆ ನೀಡಿತ್ತು ಎಂದು ಸಿಬಿಐ ಅಧಿಕಾರಿಯೋರ್ವರು ತಿಳಿಸಿದರು.

ಎಫ್‌ಐಆರ್‌ನಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಜೇಮ್ಸ್ ಮಸಿಹ್ ಮತ್ತು ಅವರ ಪುತ್ರ ರಾಬಿನ್ ಅವರನ್ನೂ ಹೆಸರಿಸಲಾಗಿದ್ದು,ಅವರನ್ನು ಇನ್ನಷ್ಟೇ ಬಂಧಿಸಬೇಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News