ಕೇರಳ ನನ್ ಅತ್ಯಾಚಾರ ಪ್ರಕರಣ: ಆರೋಪಿ ಬಿಷಪ್‌ಗೆ ನ್ಯಾಯಾಂಗ ಬಂಧನ

Update: 2018-09-24 14:12 GMT

ತಿರುವನಂತಪುರಂ, ಸೆ.24: ಕ್ರೈಸ್ತ ಭಗಿನಿಯನ್ನು ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ಬಿಷಪ್ ಫ್ರಾಂಕೊ ಮುಲಕ್ಕಳ್‌ಗೆ ನ್ಯಾಯಾಲಯ ಅಕ್ಟೋಬರ್ 6ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಅವರನ್ನು ಪಾಲಾ ಉಪ ಕಾರಾಗೃಹಕ್ಕೆ ಕಳುಹಿಸಲಾಗಿದೆ.

 ಜಲಂದರ್ ಧರ್ಮಪ್ರಾಂತ್ಯದ ಬಿಷಪ್ 2014 ಮತ್ತು 2016ರ ಮಧ್ಯೆ ತನ್ನನ್ನು ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತ ನನ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ 54ರ ಹರೆಯದ ಬಿಷಪ್‌ನ ತೀವ್ರ ವಿಚಾರಣೆ ನಡೆಸಿದ ಕೇರಳ ಪೊಲೀಸರು ಸೆಪ್ಟಂಬರ್ 21ರಂದು ಅವರನ್ನು ಬಂಧಿಸಿತ್ತು. ಆರೋಪಿ ವಿರುದ್ಧ ಅತ್ಯಾಚಾರ, ಅಕ್ರಮ ಬಂಧನ ಮತ್ತು ಬೆದರಿಕೆ ಇತ್ಯಾದಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಕೊಟ್ಟಾಯಂ ಜಿಲ್ಲಾ ಪೊಲೀಸ್ ಮುಖ್ಯಸ್ಥ ಹರಿ ಶಂಕರ್ ತಿಳಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಆರೋಪಿ ಬಿಷಪ್ ನ್ನು ಬಂಧಿಸುವಂತೆ ವಿವಿಧ ಕ್ರೈಸ್ತ ಸುಧಾರಣಾ ಸಂಘಟನೆಗಳ ಸದಸ್ಯರು ಮತ್ತು ನನ್‌ಗಳು ಕೇರಳ ಉಚ್ಚ ನ್ಯಾಯಾಲಯದ ಸಮೀಪ ಕಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೊಟ್ಟಾಯಂ ಪೊಲೀಸರಿಗೆ ಸಂತ್ರಸ್ತೆ ಬರೆದ ಪತ್ರದಲ್ಲಿ, “2014ರ ಮೇನಲ್ಲಿ ಬಿಷಪ್ ಮುಲಕ್ಕಳ್ ಕುರವಿಲಂಗಡ್‌ನಲ್ಲಿರುವ ಅತಿಥಿಗೃಹದಲ್ಲಿ ನನ್ನನ್ನು ಅತ್ಯಾಚಾರ ಮಾಡಿದ್ದಾರೆ. ನಂತರ ಹಲವು ಸಂದರ್ಭಗಳಲ್ಲಿ ನನ್ನ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದಾರೆ” ಎಂದು ಆರೋಪಿಸಿದ್ದರು. ಈ ಕುರಿತು “ನಾನು ಚರ್ಚ್‌ನ ಆಡಳಿತವರ್ಗಕ್ಕೆ ಅದೆಷ್ಟು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಅವರು ದೂರಿದ್ದರು. “ನನ್ ಹೇಳಿದಂತೆ ನಾನು ನಡೆದುಕೊಳ್ಳಲಿಲ್ಲ ಎಂಬ ಕಾರಣಕ್ಕೆ ಆಕೆ ನನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ” ಎಂದು ಬಿಷಪ್ ಮುಲಕ್ಕಳ್ ಪೊಲೀಸರಲ್ಲಿ ಪ್ರತಿದೂರು ದಾಖಲಿಸಿದ್ದರು.

 ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದು ಕ್ರೈಸ್ತ ಸಮುದಾಯದ ಕೆಲ ಸಂಘಟನೆಗಳ ಸದಸ್ಯರು ಮತ್ತು ಭಗಿನಿಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಬಿಷಪನ್ನು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News