ಬಡವರಿಂದ ಹಣ ಕಿತ್ತುಕೊಂಡು ಅನಿಲ್ ಅಂಬಾನಿಗೆ ನೀಡುತ್ತಿರುವ ಮೋದಿ : ರಾಹುಲ್ ಆರೋಪ

Update: 2018-09-24 14:19 GMT

ಅಮೇಥಿ(ಉ.ಪ್ರ),ಸೆ.24: ರಫೇಲ್ ಒಪ್ಪಂದದ ಕುರಿತು ಸೋಮವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ದೇಶದ ‘ಚೌಕಿದಾರ್’ ನರೇಂದ್ರ ಮೋದಿಯವರು ಬಡಜನರಿಂದ ಹಣವನ್ನು ಕಿತ್ತುಕೊಂಡು ಕೈಗಾರಿಕೋದ್ಯಮಿ ಅನಿಲ ಅಂಬಾನಿಯವರಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

 ರಫೇಲ್ ಯುದ್ಧ ವಿಮಾನದ ಬೆಲೆಯನ್ನೇಕೆ ಬಹಿರಂಗಗೊಳಿಸುತ್ತಿಲ್ಲ ಮತ್ತು ಅಂಬಾನಿ ಗುತ್ತಿಗೆಯನ್ನು ಪಡೆದುಕೊಂಡಿದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರಿಸುವಂತೆ ಪ್ರಧಾನಿಯನ್ನು ಅವರು ಆಗ್ರಹಿಸಿದರು.

ಸಭೆಯೊಂದರಲ್ಲಿ ಮಾತನಾಡುತ್ತಿದ್ದ ರಾಹುಲ್,ಈ ದೇಶದ ‘ಚೌಕಿದಾರ’ರು ಬಡವರು,ಹುತಾತ್ಮರು ಮತ್ತು ಯೋಧರ ಜೇಬುಗಳಿಂದ 20,000 ಕೋ.ರೂ.ಗಳನ್ನು ಕಿತ್ತುಕೊಂಡು ಅದನ್ನು ಅಂಬಾನಿಯ ಜೇಬಿಗೆ ಹಾಕಿದ್ದಾರೆ. ರಫೇಲ್ ಒಪ್ಪಂದದಲ್ಲಿಯ ಮೊತ್ತವನ್ನು ತಿಳಿದುಕೊಳ್ಳಲು ದೇಶವು ಬಯಸುತ್ತಿದೆ ಎಂದರು. ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ ಎಂದು ಅವರು ಬೆಟ್ಟು ಮಾಡಿದರು.

ಪ್ರಧಾನಿ ಮೋದಿಯವರು ಭಾಷಣಗಳನ್ನು ಮಾಡುತ್ತಾರೆ,ಆದರೆ ಅವರ ಬಳಿ ಉತ್ತರಗಳಿಲ್ಲ. ಉತ್ತರಗಳನ್ನು ನೀಡಲು ಅವರಿಗೆ ಧೈರ್ಯವಿಲ್ಲ ಎಂದರು.

ಬಿಜೆಪಿ ಸರಕಾರದ ಆಡಳಿತದಲ್ಲಿ ರೈತರು ಮತ್ತು ಬಡವರು ಆಕ್ರಂದನಗೈಯುತ್ತಿದ್ದಾರೆ. ಈ ಸರಕಾರವು ಆಯ್ದ 5-10 ಜನರಿಗೆ ಎಲ್ಲ ಲಾಭಗಳನ್ನೂ ಒದಗಿಸುತ್ತಿದೆ. ಅನಿಲ ಅಂಬಾನಿ,ವಿಜಯ ಮಲ್ಯ ಮತ್ತು ಲಲಿತ ಮೋದಿಯಂತಹ ಜನರು ಈ ಎಲ್ಲ ಲಾಭಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದೂ ರಾಹುಲ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News