ಪತ್ರಕರ್ತರ ಎದುರಲ್ಲಿ ನಡೆದ ಎನ್‌ಕೌಂಟರ್‌ ನಕಲಿ: ಮೃತರ ಕುಟುಂಬಸ್ಥರ ಆರೋಪ

Update: 2018-09-24 14:27 GMT

ಹೊಸದಿಲ್ಲಿ, ಸೆ.23: ಉತ್ತರ ಪ್ರದೇಶದಲ್ಲಿ ಪೊಲೀಸರು ಮಾಧ್ಯಮದ ಎದುರು ನಡೆಸಿದ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ನೌಶಾದ್ ಮತ್ತು ಮುಸ್ತಕೀನ್‌ರನ್ನು ಪೊಲೀಸರು ನಾಲ್ಕು ದಿನಗಳ ಹಿಂದೆಯೇ ಕರೆದುಕೊಂಡು ಹೋಗಿದ್ದರು ನಂತರ ಅವರನ್ನು ನಕಲಿ ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

ಸೆಪ್ಟಂಬರ್ 20ರಂದು ನಡೆದ ಈ ಎನ್‌ಕೌಂಟರ್‌ನ ಸಾಚಾತನದ ಬಗ್ಗೆ ಪ್ರತಿಷ್ಠಿತ ಮಾನವ ಹಕ್ಕುಗಳ ಸಂಘಟನೆ ರಿಹಾಯಿ ಮಂಚ್ ಅನೇಕ ಪ್ರಶ್ನೆಗಳನ್ನು ಎತ್ತಿದೆ. ಸೆಪ್ಟಂಬರ್ 20ರ ಸಂಜೆ ಮೃತ ವ್ಯಕ್ತಿಗಳ ಕುಟುಂಬಸ್ಥರು ಅಲಿಗಡದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಪೊಲೀಸರ ನಡೆಯನ್ನು ತೀವ್ರವಾಗಿ ಖಂಡಿಸಿದರು. ನೌಶಾದ್ ಮತ್ತು ಮುಸ್ತಕೀನ್‌ರನ್ನು ನಾಲ್ಕು ದಿನಗಳ ಮೊದಲೇ ಪೊಲೀಸರು ಕರೆದುಕೊಂಡು ಹೋಗಿದ್ದರು. ಇವರಿಬ್ಬರ ಜೊತೆಗೆ ಮುಸ್ತಕೀನ್ ಸಹೋದರ ಸಲ್ಮಾನ್ ಮತ್ತು ನನ್ನ ಮಗ ಮಾನಸಿಕ ಅಸ್ವಸ್ಥನಾಗಿರುವ ನಸೀಮ್‌ನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಮುಸ್ತಕಿನ್ ತಾಯಿ ರಫಿಕನ್ ಆರೋಪಿಸಿದ್ದಾರೆ. ನೌಶಾದ್ ತಾಯಿ ಶಾಹೀನ್ ಕೂಡಾ, ನನ್ನ ಮಗನನ್ನು ಪೊಲೀಸರು ನಕಲಿ ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನೌಶಾದ್ ಮತ್ತು ಮುಸ್ತಕಿನ್, ಕ್ವರ್ಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಬೈಕ್ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ಕಳವು ಮಾಡಿದ್ದರು. ಮರುದಿನ ಅವರು ಹರ್ದುವಾಗಂಜ್‌ನತ್ತ ತೆರಳುತ್ತಿದ್ದಾಗ ಪೊಲೀಸರು ಅವರನ್ನು ತಡೆದರು. ಆದರೆ ಅವರು ಪೊಲೀಸರ ಮೇಲೆ ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಆರೋಪಿಗಳು ಗಾಯಗೊಂಡ ಕಾರಣ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅವರು ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಸಾವನ್ನಪ್ಪಿದ್ದಾರೆ ಎಂದು ಅಲಿಗಡ ಎಸ್‌ಪಿ ಅತುಲ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ.

 ನೌಶಾದ್ ಮತ್ತು ಮುಸ್ತಕಿನ್, ಇಬ್ಬರು ಅರ್ಚಕರು ಸೇರಿದಂತೆ ಆರು ಮಂದಿಯನ್ನು ಹತ್ಯೆ ಮಾಡಿದ ಆರೋಪವನ್ನು ಎದುರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದರು. ಆರೋಪಿಗಳು ಮತ್ತು ಪೊಲೀಸರ ಮಧ್ಯೆ ನಡೆದ ಗುಂಡಿನ ಚಕಮಕಿಯನ್ನು ವೀಕ್ಷಿಸಲು ಪೊಲೀಸರು ಮಾಧ್ಯಮಗಳಿಗೆ ಆಹ್ವಾನ ನೀಡಿದ್ದರು. ನಿಜವಾದ ಎನ್‌ಕೌಂಟರನ್ನು ಸೆರೆಹಿಡಿಯುವ ಬಯಕೆಯಿದ್ದರೆ ಕೂಡಲೇ ಸ್ಥಳಕ್ಕೆ ಆಗಮಿಸುವಂತೆ ಮಾಧ್ಯಮ ಪ್ರತಿನಿಧಿಗಳಿಗೆ ಮೊಬೈಲ್ ಮೂಲಕ ಪೊಲೀಸರು ಸಂದೇಶ ಕಳುಹಿಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News