‘ಅಮೃತ್‌’ನಡಿ ಆಂಧ್ರಪ್ರದೇಶ ನಂ.1 ವಾಸಯೋಗ್ಯ ರಾಜ್ಯ

Update: 2018-09-24 16:45 GMT

ಹೊಸದಿಲ್ಲಿ, ಸೆ.24: ಅಟಲ್ ಪುನರುಜ್ಜೀವನ ಮತ್ತು ನಗರ ಪರಿವರ್ತನೆ ಆಂದೋಲನ(ಅಮೃತ್)ದಡಿ ವಾಸಯೋಗ್ಯ ಸೂಚಿಯ ಪಟ್ಟಿಯಲ್ಲಿ ಆಂಧ್ರ ಪ್ರದೇಶವು ಅಗ್ರಸ್ಥಾನದಲ್ಲಿದ್ದು,ಒಡಿಶಾ ಮತ್ತು ಮಧ್ಯಪ್ರದೇಶ ನಂತರದ ಸ್ಥಾನಗಳಲ್ಲಿವೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸೋಮವಾರ ಹೇಳಿದೆ.

ಇಲ್ಲಿ ವಾಸಯೋಗ್ಯ ಸೂಚಿ ಕುರಿತು ರಾಷ್ಟ್ರೀಯ ಪ್ರಚಾರ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು,ಸೂಚಿಯು ನಗರ ಯೋಜನೆ ಮತ್ತು ನಿರ್ವಹಣೆಗಾಗಿ ಫಲಿತಾಂಶ ಆಧರಿತ ನಿಲುವನ್ನು ತಳೆಯಲು ಎಲ್ಲ ನಗರಗಳನ್ನು ಉತ್ತೇಜಿಸಲಿದೆ ಮತ್ತು ನಗರಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಪ್ರೋತ್ಸಾಹಿಸಲಿದೆ ಎಂದು ಹೇಳಿದರು.

2015,ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದ ಅಮೃತ್,ನಗರ ಪ್ರದೇಶಗಳಲ್ಲಿ ಜನರ ಜೀವನ ಮಟ್ಟವನ್ನು ಸುಧಾರಿಸಲು ಉತ್ತಮ ಒಳಚರಂಡಿ ಜಾಲಗಳು,ನೀರು ಪೂರೈಕೆ ಮತ್ತು ಇತರ ಮೂಲಸೌಕರ್ಯಗಳನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ. ತಮ್ಮ ಸಾಮರ್ಥ್ಯ,ದೌರ್ಬಲ್ಯ ಮತ್ತು ಅವಕಾಶಗಳನ್ನು ಪುನರ್‌ಪರಿಶೀಲಿಸಿಕೊಳ್ಳಲು ನಗರಗಳಿಗೆ ನೆರವಾಗುವುದು ವಾಸಯೋಗ್ಯ ಸೂಚಿಯ ಉದ್ದೇಶವಾಗಿದೆ ಎಂದು ಪುರಿ ಹೇಳಿದರು.

ಕಳೆದ ತಿಂಗಳವರೆಗೆ ಅಮೃತ್‌ನಡಿ ದೇಶಾದ್ಯಂತ 24 ಲಕ್ಷಕ್ಕೂ ಅಧಿಕ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕಗಳನ್ನು ಒದಗಿಸಲಾಗಿದೆ ಎಂದೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News