ನೋಟುಗಳ ಚಲಾವಣೆಯಲ್ಲಿ ಮಂದಗತಿ

Update: 2018-09-24 16:52 GMT

ಮುಂಬೈ,ಸೆ.24: 2016, ನವೆಂಬರ್‌ನಲ್ಲಿ ನೋಟು ನಿಷೇಧದ ಬಳಿಕ ನೋಟುಗಳ ಚಲಾವಣೆ ತೀವ್ರವಾಗಿ ಹೆಚ್ಚಳಗೊಂಡಿದ್ದು,ನಿಷೇಧಿತ ನೋಟುಗಳ ಶೇ.99.9ರಷ್ಟು ಹೊಸನೋಟುಗಳು ಚಲಾವಣೆಗೆ ಬಂದಿವೆ. ಆದರೆ ಈ ವರ್ಷದ ಮೇ ತಿಂಗಳಿನಿಂದ ನೋಟುಗಳ ಚಲಾವಣೆಯಲ್ಲಿ ಮಂದಗತಿ ಕಾಣಿಸಿಕೊಂಡಿದ್ದು,ಹೆಚ್ಚಿರುವ ತೈಲಬೆಲೆಗಳು ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಆರ್‌ಬಿಐ ಹಸ್ತಕ್ಷೇಪ ಇದಕ್ಕೆ ಸಂಭಾವ್ಯ ಕಾರಣಗಳಾಗಿವೆ ಎಂದು ಎಸ್‌ಬಿಐನ ಸಂಶೋಧನಾ ವರದಿಯು ತಿಳಿಸಿದೆ.

 ಚಲಾವಣೆಯಲ್ಲಿರುವ ನೋಟುಗಳ ವೌಲ್ಯ 2017,ಜನವರಿಯಲ್ಲಿನ 9 ಲ.ಕೋ.ರೂ.ಗಳಿಂದ ಈ ವರ್ಷದ ಸೆ.14ಕ್ಕೆ ಇದ್ದಂತೆ 19.5 ಲ.ಕೋ.ರೂ.ಗಳಿಗೇರಿದೆ. ಆದರೆ 2018,ಮೇ ತಿಂಗಳ ಆರಂಭದಿಂದ ಈ ಏರಿಕೆಯು 19 ಲ.ಕೋ.-19.6 ಲ.ಕೋ.ಗಳ ನಡುವೆಯೇ ಇದೆ ಎಂದು ವರದಿಯು ಹೇಳಿದೆ.

 ಇಂಧನಗಳ ಬೆಲೆಏರಿಕೆಯಿಂದ,ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನರು ವೆಚ್ಚಗಳನ್ನು ಕಡಿಮೆ ಮಾಡುತ್ತಿರುವುದು ಇದಕ್ಕೆ ಸಂಭಾವ್ಯ ಕಾರಣಗಳಲ್ಲೊಂದಾಗಿರಬಹುದು. ಆರ್‌ಬಿಐ ತನ್ನ ವಿದೇಶಿ ವಿನಿಮಯ ಮೀಸಲಿನಿಂದ ಡಾಲರ್‌ಗಳನ್ನು ನೇರವಾಗಿ ನಿಯೋಜಿತ ಡೀಲರ್‌ಗಳು/ಬ್ಯಾಂಕುಗಳಿಗೆ ಮಾರಾಟ ಮಾಡುವ ಮೂಲಕ ರೂಪಾಯಿಗಳನ್ನು ಮರಳಿ ಪಡೆಯುತ್ತಿರುವುದು ಚಲಾವಣೆಯಲ್ಲಿಯ ನೋಟುಗಳು ಕಡಿಮೆಯಾಗಿರುವುದಕ್ಕೆ ಇನ್ನೊಂದು ಕಾರಣವಾಗಿರಬಹುದು ಎಂದು ವರದಿಯು ತಿಳಿಸಿದೆ. ಆರ್‌ಬಿಐ ಹಾಳಾದ ನೋಟುಗಳನ್ನು ಬದಲಿಸುತ್ತಿರುವದೂ ಇದಕ್ಕೆ ಕಾರಣವಾಗಿರಬಹುದು,ಆದರೆ ಇದು ಮಹತ್ವದ್ದಲ್ಲ ಎಂದೂ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News