‘ಗುಜರಾತ್ ನರಮೇಧದ ಸಂದರ್ಭ ಮೋದಿ ಸರಕಾರ ಮೂಕ ಪ್ರೇಕ್ಷಕ’ ಎಂಬ ಉಲ್ಲೇಖ: ಸ್ಟಡಿ ಗೈಡ್‌ ಲೇಖಕರ ವಿರುದ್ಧ ಎಫ್‌ಐಆರ್ ದಾಖಲು

Update: 2018-09-24 17:09 GMT

ಹೊಸದಿಲ್ಲಿ, ಸೆ. 24: ಅಸ್ಸಾಮಿಗಳ ಸ್ಟಡಿ ಗೈಡ್ ಬುಕ್ ಒಂದರ ನಾಲ್ಕನೇ ಅಧ್ಯಾಯದಲ್ಲಿ ‘ಗುಜರಾತ್ ನರಮೇಧದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮೂಕ ಪ್ರೇಕ್ಷಕ’ ಎಂಬ ವಾಕ್ಯದ ಹಿನ್ನೆಲೆಯಲ್ಲಿ ಪುಸ್ತಕದ ಲೇಖಕನ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ.

ನಮ್ಮ ಜನಪ್ರಿಯ ಪ್ರಧಾನ ಮಂತ್ರಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಲೇಖಕರು ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ ಎಂದು ಪ್ರಥಮ ಮಾಹಿತಿ ವರದಿಯಲ್ಲಿ ಹೇಳಲಾಗಿದೆ. ಸೆಪ್ಟಂಬರ್ 15ರಂದು ಗೋಪಾಲ್‌ಘಾಟ್ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ. ಅನಂತರ ಈ ಎಫ್‌ಐಆರ್ ಅನ್ನು ಅಸ್ಸಾಂ ಬುಕ್ ಡಿಪೋ ಇರುವ ಗುವಾಹತಿಗೆ ವರ್ಗಾಯಿಸಲಾಯಿತು.

ಈ ಗೈಡ್ ಬುಕ್ 2011ರಿಂದ ಚಲಾವಣೆಯಲ್ಲಿ ಇದೆ. ಎನ್‌ಸಿಇಆರ್‌ಟಿ ಹಾಗೂ ಅಸ್ಸಾಂ ಸೆಕೆಂಡರಿ ಎಜುಕೇಶನ್ ಕೌನ್ಸಿಲ್ ನಿಗದಿಪಡಿಸಲಾದ ಪಠ್ಯ ಕ್ರಮದೊಂದಿಗೆ ಈ ವಾಕ್ಯ ಇದೆ. ಈ ಪುಸ್ತಕದ ಲೇಖಕರು ದುರ್ಗಾಕಾಂತ್ ಶಮಾ, ರಫೀಕ್ ಝಮಾನ್, ಮಾನಸ ಪ್ರತೀಮ್ ಬರುಹಾ. ಇಲ್ಲರೂ ಗೌರವಾನ್ವಿತ ಅಧ್ಯಾಪಕರು. ಶರ್ಮಾ ಹಾಗೂ ಝಮಾನ್ ಕಾಲೇಜುಗಳ ರಾಜಕೀಯ ಶಾಸ್ತ್ರ ವಿಭಾಗದ ನಿವೃತ್ತ ಅಧ್ಯಾಪಕರು. ಬರುಹಾ ಗುವಾಹತಿ ಸಮೀಪದ ಕಾಲೇಜಿನ ಸ್ಥಾನಿಕ ಮುಖ್ಯಸ್ಥರು. ಪುಸ್ತಕದ 376ನೇ ಪುಟದ ‘ರೀಸೆಂಟ್ ಇಸ್ಯೂ ಆ್ಯಂಡ್ ಚಾಲೆಂಜಸ್’ ಅಧ್ಯಾಯದಲ್ಲಿ ಈ ವಾಕ್ಯ ಇದೆ.

‘‘ಗುಜರಾತ್ ಹತ್ಯಾಕಾಂಡದ ಬಗ್ಗೆ ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ನಡೆದ ಸಿಟ್ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದೆ.’’ ಎಂದು ದೂರುದಾರರಾದ ಸುಮಿತ್ರಾ ಗೋಸ್ವಾಮಿ ಹಾಗೂ ಮನಾಬ್ ಜ್ಯೋತಿ ಬೋರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News