ಗಂಜಿಮಠ ತಲುಪಿದ ಸಮೀರ್ ಮೃತದೇಹ

Update: 2018-09-25 04:05 GMT

ಮಂಗಳೂರು, ಸೆ.25:ತಮಿಳ್ನಾಡಿನ ಕೃಷ್ಣಗಿರಿ ಜಿಲ್ಲೆಯ ಕೇನಿ ಸಮೀಪದ ದೇವತಾನಪಟ್ಟಿ ಎಂಬಲ್ಲಿ ರವಿವಾರ ಪತ್ತೆಯಾದ ಬಡಗ ಉಳಿಪಾಡಿ ಗ್ರಾಮದ ಗಂಜಿಮಠ ಸಮೀಪದ ಜೆ.ಎಂ.ರಸ್ತೆಯ ನಿವಾಸಿ ಮುಹಮ್ಮದ್ ಸಮೀರ್ (35)ರ ಮೃತದೇಹವು ವಿಶೇಷ ಆ್ಯಂಬುಲೆನ್ಸ್‌ನಲ್ಲಿ ಮಂಗಳವಾರ ಬೆಳಗ್ಗೆ 8:19ಕ್ಕೆ ಗಂಜಿಮಠ ತಲುಪಿತು.

ಸೋಮವಾರ ಅಪರಾಹ್ನ ತಮಿಳ್ನಾಡಿನಿಂದ ಹೊರಟ ಈ ಆ್ಯಂಬುಲೆನ್ಸ್ ಮಂಗಳವಾರ ಅಹ್ಮದ್ ಸಾಹೇಬರ ಮನೆಗೆ ತಲುಪಿದಾಗ ಗ್ರಾಮಸ್ಥರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. 

ಸಾರ್ವಜನಿಕ ವೀಕ್ಷಣೆಯ ಬಳಿಕ ಮೃತದೇಹವನ್ನು ಗಂಜಿಮಠ ಜಾಮಿಯ ಮಸೀದಿಯ ವಠಾರದಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸಿ ದಫನ ಮಾಡಲಾಯಿತು.

ಘಟನೆಯ ವಿವರ: ಸೆ.13ರಂದು ಸಮೀರ್ ತನ್ನ ಪತ್ನಿ ಫಿರ್ದೌಸ್ ಮತ್ತು ಮೂರು ತಿಂಗಳ ಹೆಣ್ಣು ಮಗುವಿನೊಂದಿಗೆ ತನ್ನ ಮನೆಯಿಂದ ಬೆಂಗಳೂರಿಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ತೆರಳಿದ್ದರು. ಸೆ.15ರಂದು ಸಂಜೆ ತನ್ನ ತಾಯಿಗೆ ದೂರವಾಣಿ ಕರೆ ಮಾಡಿದ್ದ ಸಮೀರ್ ತಾನು ಬೆಂಗಳೂರಿನಲ್ಲಿರುವುದಾಗಿ ತಿಳಿಸಿದ್ದು, ಬಳಿಕ ಸಮೀರ್ ತನ್ನ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಮಧ್ಯೆ ಸೆ.18ರಂದು ಫಿರ್ದೌಸ್ ಮಗುವಿನೊಂದಿಗೆ ಕಾಪು ಸಮೀಪದ ಮಜೂರ್‌ನಲ್ಲಿರುವ ತನ್ನ ತಾಯಿಯ ಮನೆಗೆ ಬಂದಿರುವ ವಿಷಯ ತಿಳಿದ ಸಮೀರ್‌ನ ಮನೆಮಂದಿ ಅಲ್ಲಿಗೆ ತೆರಳಿ ಆಕೆಯಲ್ಲಿ ಸಮೀರ್‌ನ ಬಗ್ಗೆ ವಿಚಾರಿಸಿದಾಗ ‘ಸಮೀರ್ ಬೇರೆ ಹುಡುಗಿಯ ಸಂಪರ್ಕದಲ್ಲಿದ್ದು, ತನ್ನನ್ನು ಮತ್ತು ಮಗುವನ್ನು ಕಾಪುವಿನಲ್ಲಿ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದಳು. ಸಂಶಯಗೊಂಡ ಸಮೀರ್‌ನ ತಂದೆ ಅಹ್ಮದ್ ಸಾಹೇಬ್ ಬಜ್ಪೆ ಪೊಲೀಸರಿಗೆ ಕಾಣೆಯಾದ ಬಗ್ಗೆ ದೂರು ನೀಡಿದ್ದರು.

ತದನಂತರ ಮನೆಮಂದಿ ಹಾಗೂ ಗಂಜಿಮಠ ಗ್ರಾಪಂ ಮಾಜಿ ಸದಸ್ಯ ಜಿ.ಎಂ.ಇಮ್ತಿಯಾಝ್, ಸೂರಲ್ಪಾಡಿಯ ಅಬ್ದುಲ್ ಖಾದರ್ ಮತ್ತಿತರರು ಸಮೀರ್‌ಗಾಗಿ ಬೆಂಗಳೂರಿಗೆ ತೆರಳಿ ಹುಡುಕಾಟ ಆರಂಭಿಸಿದ್ದರು. ಈ ಮಧ್ಯೆ ಸಮೀರ್‌ನ ಮೊಬೈಲ್ ತಮಿಳ್ನಾಡಿನಲ್ಲಿರುವ ಲೊಕೇಶನ್ ತೋರಿಸುತ್ತಿತ್ತು. ಅಲ್ಲದೆ ತಮಿಳ್ನಾಡಿನ ದೇವತಾನಪಟ್ಟಿ ಎಂಬಲ್ಲಿ ಮೃತದೇಹವೊಂದು ಪತ್ತೆಯಾಗಿದೆ ಎಂಬ ಮಾಹಿತಿಯೂ ಸಿಕ್ಕಿತ್ತು. ಅದರಂತೆ ಬೆಂಗಳೂರಿಗೆ ತೆರಳಿದ್ದವರು

ರವಿವಾರ ತಮಿಳ್ನಾಡಿಗೆ ತೆರಳಿ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮೃತದೇಹದ ಫೋಟೋ ವೀಕ್ಷಿಸಿದ್ದರು. ಸಮೀರ್ ಬಳಸಿದ್ದ ವಾಚ್, ಬೆಲ್ಟ್, ಬಟ್ಟೆಬರೆ ಮತ್ತು ಶೂವನ್ನು ಆಧರಿಸಿ ಸಹೋದರ ಮುಹಮ್ಮದ್ ಝಹೀರ್ ಮೃತದೇಹದ ಗುರುತು ಪತ್ತೆ ಹಚ್ಚಿದ್ದರು. ಅಲ್ಲದೆ ಅಲ್ಲಿನ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸಮೀರ್‌ನ ಆಧಾರ್ ಸಹಿತ ಮತ್ತಿತರ ಪೂರಕ ದಾಖಲೆಪತ್ರಗಳನ್ನು ಸಲ್ಲಿಸಿದರು. ನಂತರ ದಫನ ಮಾಡಲಾಗಿದ್ದ ಮೃತದೇಹವನ್ನು ಮೇಲಕ್ಕೆತ್ತಿ ಕಾನೂನು ಪ್ರಕ್ರಿಯೆ ಮುಗಿಸಿದ ನಂತರ ಪೊಲೀಸರು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News