ದ.ಕ. ಜಿಲ್ಲೆಯಲ್ಲಿ ಮತ್ತೆ ತಲವಾರು ಸದ್ದು

Update: 2018-09-25 12:46 GMT

ಮಂಗಳೂರು, ಸೆ.25: ಕೆಲ ಸಮಯದಿಂದ ಒಂದಿಷ್ಟು ಶಾಂತವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ತಲವಾರು ಸದ್ದು ಕೇಳಿಬಂದಿದೆ. ಸೆ.24ರಂದು ಒಂದೇ ದಿನ ಇಬ್ಬರ ಮೇಲೆ ದುಷ್ಕರ್ಮಿಗಳು ಮಾರಕಾಯುಧಗಳಿಂದ ದಾಳಿ ನಡೆಸಿದ್ದಾರೆ. ಇದು ಸಾರ್ವಜನಿಕರನ್ನು ಮತ್ತೆ ಆತಂಕಿತರನ್ನಾಗಿಸಿದೆ.

ಸೋಮವಾರ(ಸೆ.24) ಬೆಳಗ್ಗೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಗಂಟಾಲ್‌ಕಟ್ಟೆ ಎಂಬಲ್ಲಿ ಮುಹಮ್ಮದ್ ಇಮ್ತಿಯಾಝ್(32) ಎಂಬವರ ಮೇಲೆ ನಾಲ್ಕೈದು ಮಂದಿಯ ತಂಡವೊಂದು ತಲವಾರು ದಾಳಿ ನಡೆಸಿ ಹತ್ಯೆಗೆ ಪ್ರಯತ್ನಿಸಿದೆ. ಕರಿಂಜ ಗ್ರಾಮದ ಗಂಟಾಲ್‌ಕಟ್ಟೆ ನಿವಾಸಿಯಾಗಿರುವ ಇವರು ಗಂಟಾಲ್‌ಕಟ್ಟೆಯಲ್ಲಿರುವ ತನ್ನ ಹೋಟೆಲ್‌ನಲ್ಲಿದ್ದ ವೇಳೆ ಚಹಾ ಕುಡಿಯುವ ನೆಪದಲ್ಲಿ ಬಂದ ತಂಡ ಈ ದುಷ್ಕೃತ್ಯ ಎಸಗಿದೆ. ಇದರಿಂದ ಇಮ್ತಿಯಾಝ್ ಅವರ ಕೈ, ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇವರು 2015ರಲ್ಲಿ ಮೂಡುಬಿದಿರೆಯಲ್ಲಿ ನಡೆದ ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.

*ಸೂರಲ್ಪಾಡಿಯಲ್ಲಿ ಬಸ್ ಏಜೆಂಟ್ ಮೇಲೆ ದಾಳಿ
ಈ ದಾಳಿಯ ತನಿಖೆ ಮುಂದುವರಿದಿರುವಂತೆಯೇ ರಾತ್ರಿ ಎಂಟು ಗಂಟೆ ಸುಮಾರಿಗೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂರಲ್ಪಾಡಿ ಎಂಬಲ್ಲಿ ಬಸ್ ಏಜೆಂಟ್ ಒಬ್ಬರ ಮೇಲೆ ದುಷ್ಕರ್ಮಿಗಳು ತಲವಾರು ಬೀಸಿದ್ದಾರೆ.

ಪೊಳಲಿ ನಿವಾಸಿ ಹರೀಶ್ ಶೆಟ್ಟಿ ಸೋಮವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ಸೂರಲ್ಪಾಡಿ ಬಳಿ ಸಂಚರಿಸುತ್ತಿದ್ದಾಗ ಇನ್ನೆರಡು ದ್ವಿಚಕ್ರ ವಾಹನದಲ್ಲಿ ಬಂದ ಮೂವರ ತಂಡ ಅವರ ಮೇಲೆ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದೆ. ಇದರಿಂದ ಹರೀಶ್ ಶೆಟ್ಟಿಯ ತಲೆ ಮತ್ತು ಕೈಗಳಿಗೆ ಗಾಯಗಳಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹರೀಶ್ ಸಂಘ ಪರಿವಾರದ ಕಾರ್ಯಕರ್ತರಾಗಿದ್ದಾರೆ.


*ಸೂಕ್ತ ಕ್ರಮಕ್ಕೆ ಸಚಿವ ಖಾದರ್ ಸೂಚನೆ

ಎರಡು ಅಹಿತಕರ ಘಟನೆಗಳ ಬಗ್ಗೆ ಕೂಡಲೇ ಮಾಹಿತಿ ಕಲೆ ಹಾಕಿರುವ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಅಪರಾಧಿಗಳ ಶೀಘ್ರ ಬಂಧನಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಹರೀಶ್ ಶೆಟ್ಟಿ ದಾಖಲಾಗಿರುವ ಆಸ್ಪತ್ರೆಗೆ ಶಾಸಕರಾದ ಉಮಾನಾಥ ಕೋಟ್ಯಾನ್, ವೇದವ್ಯಾಸ್ ಕಾಮತ್ ಹಾಗೂ ಭರತ್ ಶೆಟ್ಟಿ ಭೇಟಿ ಮಾಹಿತಿ ಕಲೆ ಹಾಕಿದ್ದಾರೆ. ದಾಳಿ ನಡೆಸಿದ ದುಷ್ಕರ್ಮಿಗಳನ್ನ ಶೀಘ್ರ ಬಂಧಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ.

ಒಂದೇ ದಿನ ಎರಡು ಅಹಿತಕರ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News