ಬಿಜೆಪಿ ಹೊರತಾದ ಪಕ್ಷಗಳೊಂದಿಗೆ ಮೈತ್ರಿಗೆ ಸಿದ್ಧ: ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ

Update: 2018-09-25 12:57 GMT

ಮಂಗಳೂರು, ಸೆ.25: ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ ಸೃಷ್ಟಿಯಾಗಿದ್ದು, ಇದಕ್ಕೆ ಕಾರಣವಾದ ಬಿಜೆಪಿಯನ್ನು ಸೋಲಿಸುವ ಸಲುವಾಗಿ ಬಿಜೆಪಿ ಹೊರತುಪಡಿಸಿ ಇತರ ಪಕ್ಷಗಳೊಂದಿಗೆ ಮೈತ್ರಿಗೆ ಪಕ್ಷ ಸಿದ್ಧವಿದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಹೇಳಿದರು.

ನಗರದ ಜಂ ಇಯ್ಯತುಲ್ ಫಲಾಹ್ ಹಾಲ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಸರಕಾರದ ನೀತಿ-ನಿಲುವುಗಳನ್ನು ಪ್ರಶ್ನಿಸುವವರನ್ನು ಬಂಧಿಸುವ ಪ್ರಕ್ರಿಯೆ ಹೆಚ್ಚುತ್ತಿವೆ. ನಗರ ನಕ್ಸಲ್ ಹೆಸರಿನಲ್ಲಿ ಬೆದರಿಸುವ, ಬಗ್ಗುಬಡಿಯುವ ತಂತ್ರಗಾರಿಕೆ ನಡೆಯುತ್ತಿವೆ. ಬಿಜೆಪಿ ಅಧಿಕಾರಕ್ಕೇರುವ ಮುನ್ನವೂ ತಪ್ಪು ಮಾಡಿವೆ, ಬಳಿಕವೂ ತಪ್ಪು ಮಾಡುತ್ತಲೇ ಇವೆ. ಅವುಗಳನ್ನು ಮರೆ ಮಾಚಲು ವಿಷಯಾಂತರದ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿವೆ ಎಂದರು.

ಬಿಜೆಪಿಯ ಸೋಲಿಗೆ ಕಾಂಗ್ರೆಸ್ ನೇತೃತ್ವದ ಎಡಪಕ್ಷಗಳನ್ನೊಳಗೊಂಡ ಮೈತ್ರಿಗೆ ವೇದಿಕೆ ಸಿದ್ಧವಾದರೆ ತಾವು ಅದರಲ್ಲಿ ಭಾಗಿಯಾಗುವಿರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಎಂ.ಕೆ.ಫೈಝಿ ‘ಹೌದು... ಬಿಜೆಪಿಯನ್ನು ಸೋಲಿಸಲು ನಡೆಯುವ ಎಲ್ಲಾ ರೀತಿಯ ಪ್ರಯತ್ನಕ್ಕೆ ನಮ್ಮ ಬೆಂಬಲವಿದೆ. ಇಲ್ಲಿ ಕಾಂಗ್ರೆಸ್, ಎಡಪಕ್ಷಗಳ ಪ್ರಶ್ನೆ ಉದ್ಭವಿಸುವುದಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಡಪಕ್ಷಗಳ ಸಹಿತ ಮಹಾಮೈತ್ರಿ ಕೂಟ ಅಥವಾ ತೃತೀಯ ರಂಗದೊಂದಿಗೂ ಕೈ ಜೋಡಿಸಲು ಪಕ್ಷ ಸಿದ್ಧವಿದೆ ಎಂದರು.

ಕಾಂಗ್ರೆಸ್, ಸಿಪಿಎಂ ಸಹಿತ ಎಡಪಕ್ಷಗಳೊಂದಿಗೆ ಜತೆ ಮೈತ್ರಿ ಮಾಡಿಕೊಳ್ಳಬಾರದೆಂಬ ಅಜೆಂಡಾ ಪಕ್ಷದಲ್ಲಿಲ್ಲ. ಬಿಜೆಪಿಯನ್ನು ಸೋಲಿಸಲು ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ. ಇದರಿಂದ ಪಕ್ಷಕ್ಕೆ ಧಕ್ಕೆಯಾಗುವುದಿಲ್ಲ. ಬದಲಾಗಿ ಪಕ್ಷದ ವರ್ಚಸ್ಸು ಹೆಚ್ಚಲಿದೆ ಎಂದ ಎಂ.ಕೆ.ಫೈಝಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಒಂದಷ್ಟು ಸ್ಥಾನ ಸಿಗುತ್ತದೆ ಎಂಬ ಉದ್ದೇಶದಿಂದ ಮೈತ್ರಿಗೆ ಮುಂದಾಗುತ್ತಿಲ್ಲ. ಸ್ಥಾನ ಸಿಗುತ್ತದೆಯೋ, ಬಿಡುತ್ತದೋ ಗೊತ್ತಿಲ್ಲ. ಆದರೆ ಫ್ಯಾಸಿಸ್ಟ್ ಶಕ್ತಿಯಾದ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಮೊದಲ ಗುರಿಯಾಗಿದೆ ಎಂದು ಸ್ಪಷ್ಪಪಡಿಸಿದರು.

ಬಿಜೆಪಿ ದೇಶದ ಸಂವಿಧಾನದ ಆಶಯಗಳನ್ನು ಹಾಳು ಮಾಡುತ್ತಿದೆ. ಕಾನೂನನ್ನು ಕೈಗೆ ತೆಗೆದುಕೊಂಡು ಅರಾಜಕತೆ ಸೃಷ್ಟಿಸುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರ, ಕೇಸು ದಾಖಲಿಸಿದ ಸಂತ್ರಸ್ತರ ಮೇಲೆಯೇ ದಾಳಿ ನಡೆಸಲಾಗುತ್ತಿದೆ. ಆದ್ದರಿಂದ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದು ದೇಶ ರಕ್ಷಿಸಲು ಎಲ್ಲ ರಾಜಕೀಯ ಪಕ್ಷಗಳು ತಮ್ಮ ವೈಯಕ್ತಿಕ ರಾಜಕೀಯ ಹಿತಾಸಕ್ತಿ ಬದಿಗಿಟ್ಟು ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕಾಗಿದೆ. ಬಿಜೆಪಿ ಸೋಲಿಸಲು ಎಸ್‌ಡಿಪಿಐ ಕೂಡ ರಾಷ್ಟ ಮಟ್ಟದಲ್ಲಿ ಅಭಿಯಾನ ಆರಂಭಿಸಿದೆ ಎಂದು ಎಂ.ಕೆ. ಫೈಝಿ ತಿಳಿಸಿದರು.

ನಾಲ್ಕು ವರ್ಷ ಆಡಳಿತ ನಡೆಸಿದ ಕೇಂದ್ರ ಸರಕಾರ ಯಾವುದೇ ಭರವಸೆ ಈಡೇರಿಸಿಲ್ಲ. ಕಾಳಧನಕ್ಕೆ ಕಡಿವಾಣ ಹಾಕುವುದಾಗಿ ಹೇಳಿ ನೋಟು ಅಮಾನ್ಯ ಮಾಡಿತ್ತು. ಆದರೆ ಕಾಳಧನ ಬಾರದೆ ದೇಶಕ್ಕೆ ಸಹಸ್ರಾರು ಕೋಟಿ ರೂ. ವಂಚಿಸಿದ ಅನೇಕರು ವಿದೇಶಕ್ಕೆ ಓಡಿಹೋಗಿದ್ದಾರೆ. ಇದಕ್ಕೆ ಕೇಂದ್ರ ಸರಕಾರವೇ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿದೆ. ಅದೇ ರೈತನೊಬ್ಬ ಸಾಲ ಕೇಳಲು ಹೋದರೆ ನೂರಾರು ದಾಖಲೆ ಕೇಳುವ ಬ್ಯಾಂಕ್ ಅಧಿಕಾರಿಗಳು ಬಂಡವಾಳಶಾಹಿಗಳಿಗೆ ಎಗ್ಗಿಲ್ಲದೆ ಸಾಲ ನೀಡುತ್ತಿದೆ ಎಂದರು.

ಪೆಟ್ರೋಲ್, ಡೀಸೆಲ್ ಬೆಲೆ ನಿಯಂತ್ರಣ ಮಾಡುವುದು ನಮ್ಮ ಕೈಲಿಲ್ಲ ಎಂದು ಸ್ವತಃ ಕೇಂದ್ರ ಸಚಿವರೇ ಹೇಳಿಕೆ ನೀಡುತ್ತಾರೆ. ಸರಕಾರಿ ಸ್ವಾಮ್ಯದ ಎಚ್‌ಎಎಲ್ ಸಂಸ್ಥೆಯೊಂದಿಗೆ ರಫೇಲ್ ಒಪ್ಪಂದ ಮಾಡುವುದು ಬಿಟ್ಟು ರಿಲಯನ್ಸ್ ಕಂಪೆನಿ ಜತೆ ಒಪ್ಪಂದ ಮಾಡಿಕೊಂಡ ಬಗ್ಗೆ ಪ್ರಧಾನಿ ಮೋದಿಯಾಗಲೀ, ರಕ್ಷಣಾ ಸಚಿವರಾಗಲೀ ಮಾತನಾಡುತ್ತಿಲ್ಲ. ಬಿಜೆಪಿಯೂ ಚರ್ಚೆಗೆ ಸಿದ್ಧವಿಲ್ಲ. ಈ ಹಗರಣವನ್ನು ಜನರ ಮನಸ್ಸಿನಿಂದ ದೂರ ಮಾಡಲು ಧರ್ಮದ ವಿಷಯಗಳನ್ನು ಕೆದಕುತ್ತಿವೆ ಎಂದು ಎಂ.ಕೆ. ಫೈಝಿ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಅಬ್ದುಲ್ ಮಜೀದ್ ಕೂಡ್ಲಿಪೇಟೆ, ಇಲ್ಯಾಸ್ ಮುಹಮ್ಮದ್ ತುಂಬೆ, ಆಲ್ಫಾನ್ಸೋ ಫ್ರಾಂಕೋ, ಅಥಾವುಲ್ಲಾ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ನಿರುದ್ಯೋಗ ಪಿಡುಗಿಗೆ ಕಡಿವಾಣ ಹಾಕಿ
ಕೇಂದ್ರ ಸರಕಾರ ತ್ರಿವಳಿ ತಲಾಕ್ ಸುಗ್ರೀವಾಜ್ಞೆ ಹೊರಡಿಸಿರುವುದು ಮುಸ್ಲಿಮ್ ಸಮುದಾಯದ ಮೇಲಿನ ಪ್ರೀತಿಯಿಂದಲ್ಲ. ಜನರನ್ನು ಧಾರ್ಮಿಕ ಭಾವನೆಗೆ ಸಿಲುಕಿಸಿ ಮತಗಿಟ್ಟಿಸುವ ಕೋಮುವಾದಿ ಅಜೆಂಡಾವಾಗಿದೆ. ವಿವಾಹ ಪ್ರಕ್ರಿಯೆಯನ್ನು ಸಿವಿಲ್ ಮತ್ತು ಅಪರಾಧ ವ್ಯೆಹದೊಳಗೆ ಸೇರಿಸಲು ಕೇಂದ್ರ ಸರಕಾರ ಷಡ್ಯಂತ್ರ ನಡೆಸುತ್ತಿವೆ. ಕೇಂದ್ರಕ್ಕೆ ಮುಸ್ಲಿಮ್ ಮಹಿಳೆಯರ ಬಗ್ಗೆ ನೈಜ ಕಾಳಜಿಯಿದ್ದರೆ ಶಿಕ್ಷಣಕ್ಕೆ ಆದ್ಯತೆ, ನಿರುದ್ಯೋಗ ಪಿಡುಗಿಗೆ ಕಡಿವಾಣ ಹಾಕಲಿ ಎಂದು ಎಂ.ಕೆ.ಫೈಝಿ ಸವಾಲು ಹಾಕಿದರು.

ಎಸ್‌ಡಿಪಿಐ ‘ಫ್ಯಾಸಿಸ್ಟ್’ ಮಾಡಿದ್ದು ಸಂಘ ಪರಿವಾರ
ಎಸ್‌ಡಿಪಿಐ ಫ್ಯಾಸಿಸ್ಟ್ ಪಕ್ಷ ಎನ್ನುವ ಆರೋಪವಿದ್ದರೆ ಅದನ್ನು ಮಾಡಿದ್ದು ಸಂಘ ಪರಿವಾರ. ಕೋಮುವಾದ ನಮ್ಮ ಪಕ್ಷದ ಸಿದ್ಧಾಂತ ಅಲ್ಲ. ನಮ್ಮದು ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ದೇಶದ ಸಂವಿಧಾನವನ್ನು ಬದಲಾಯಿಸಬೇಕೆಂಬ ಬೇಡಿಕೆಯೂ ಪಕ್ಷದಲ್ಲಿಲ್ಲ. ಆದರೆ ಸಂಘ ಪರಿವಾರ ಅದನ್ನು ಮಾಡುತ್ತಿದೆ ಎಂದು ಎಂ.ಕೆ.ಫೈಝಿ ಆರೋಪಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News