ಕಲಾವಿದ ಕಂದನ್‌ರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

Update: 2018-09-25 11:23 GMT

ಮಂಗಳೂರು, ಸೆ.25: ನಗರದ ಖ್ಯಾತ ಕಲಾವಿದ ಕಂದನ್ ಜಿಯವರು ತಮ್ಮ ‘ಸಮಕಾಲೀನ ಸಮಾಜ-98’ ಎಂಬ ಕಲಾಕೃತಿಗೆ 18ನೆ ಏಷ್ಯನ್ ಆರ್ಟ್ ಬಿನಾಲೆ ಬಾಂಗ್ಲಾದೇಶ್ ಅಂತಾರಾಷ್ಟ್ರೀಯ ಗ್ರಾಂಡ್ ಪ್ರಶಸ್ತಿ ಗಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಮಹಲಸಾ ಚಿತ್ರಕಲಾ ಶಾಲೆ ಮುಖ್ಯಸ್ಥ ಎನ್.ಎಸ್. ಪತ್ತಾರ್, ಪ್ರಸಕ್ತ ಸಾಲಿನ ಈ ಪ್ರಶಸ್ತಿಯಲ್ಲಿ ವಿಶ್ವದ 68 ದೇಶಗಳ ಕಲಾವಿದರು ಭಾಗವಹಿಸಿದ್ದರು. ವಿವಿಧ ದೇಶದ 465 ಕಲಾವಿದರ ಒಟ್ಟು 483 ಕಲಾಕೃತಿಗಳು ಕಲಾ ಪ್ರದರ್ಶನಕ್ಕೆ ಆಯ್ಕೆಯಾಗಿದ್ದವು. ಭಾರತೀಯ ಕಲಾವಿದರ 7 ವರ್ಣಚಿತ್ರಗಳು, 6 ಮಿಶ್ರ ಮಾಧ್ಯಮದ ಕಲಾಕೃತಿಗಳು, 6 ಮುದ್ರಣ ಕಲೆ ಕಲಾಕೃತಿಗಳು, 4 ಮಿಶ್ರ ಮಾಧ್ಯಮಗಳು ಶಿಲ್ಪ ಕಲಾಕೃತಿಗಳು ಆಯ್ಕೆಯಾಗಿದ್ದವು. ಕಂದನ್ ಜಿಯವರ ವರ್ಣಚಿತ್ರ ಕಲಾಕೃತಿಗೆ ಮೂರು ವಿಶ್ವದ ಮಟ್ಟದ ಗ್ರಾಂಡ್ ಅವಾರ್ಡ್‌ನಲ್ಲಿ ಒಂದು ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು.

ಕ್ಯಾನ್ವಾಸ್ ಮೇಲೆ ಅಕ್ರಲಿಕ್ ವರ್ಣ ಮಾಧ್ಯಮದಲ್ಲಿ 48x60 ಅಂಗುಲದ ಈ ಕಲಾಕೃತಿಯ ವಿಷಯವಸ್ತು ಸಮಕಾಲೀನ ಪ್ರಪಂಚದ ಅರ್ಥವ್ಯವಸ್ಥೆಯ ತಳಮಳವನ್ನು ಬಿಂಬಿಸುತ್ತದೆ. ಗೂಳಿಯ ಮೈಮೇಲಿನ ಪತ್ರಿಕರೆಗಳ ತುಣುಕುಗಳ ರಚನೆ ಅಲ್ಲಲ್ಲಿ ಸಂಕೇತಗಳೊಂದಿಗೆ ಸುದ್ದಿ ಪ್ರಧಾನತೆಯನ್ನು ಬಿಂಬಿಸುತ್ತವೆ. ವಿದ್ಯುತ್ ಪ್ರವಾಹದಂತೆ ಹರಿದ ತಂತಿಗಳು ಒಂದೆಡೆ ಗೂಳಿಯ ಅರ್ಥಾತ್ ವಿಶ್ವದ ಅರ್ಥ ವ್ಯವಸ್ಥೆಯನ್ನು ಪ್ರಬಲವಾಗಿ ಬಿಂಬಿಸಿದರೆ, ಇನ್ನೊಂದೆಡೆ ಸಾಮಾನ್ಯ ಜನರ ಬದುಕನ್ನು ಬಿಂಬಿಸಲಾಗಿದೆ. ಅಲ್ಲಲ್ಲಿ ಚದುರಿ ಬಿದ್ದ ಕುರ್ಚಿಗಳು, ತೀವ್ರ ರೀತಿಯ ಅರ್ಥವ್ಯವಸ್ಥೆಯ ಹೊಡೆತಕ್ಕೆ ತತ್ತರಿಸಿದ ಜನಸಾಮಾನ್ಯರ ಬದುಕಿನ ಸ್ಥಿತಿಯನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು.

ಕಂದನ್ ಜಿ. ಸ್ವಯಂ ಆಗಿ ಚಿತ್ರಕಲೆಯನ್ನು ಅಭ್ಯಸಿಸಿದ ವೃತ್ತಿಪರ ಚಿತ್ರಕಲಾವಿದ. ಅವರು ವಿಶ್ವಭಾಷೆಯಾದ ಚಿತ್ರಕಲೆಯನ್ನು ಸಮಕಾಲೀನವಾಗಿ ದುಡಿಸಿಕೊಂಡು ಭಾರತದ ಸಮಕಾಲೀನ ಸಂದರ್ಭದಲ್ಲಿ ತಮ್ಮ ಚಾಪು ಮೂಡಿಸಿದ್ದಾರೆ ಎಂದು ಪತ್ತಾರ್ ಹೇಳಿದರು.

ಕಳೆದ 30 ವರ್ಷಗಳಿಂದ ಚಿತ್ರಕಲೆಯನ್ನು ತನ್ನನ್ನು ತೊಡಗಿಸಿಕೊಂಡಿದ್ದು, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ತಮಗೆ ದೊರೆಯಬಹುದು ಎಂಬ ಕನಸನ್ನೂ ತಾವು ಹೊಂದಿರಲಿಲ್ಲ ಎಂದು ಕಲಾವಿದ ಕಂದನ್ ಜಿ. ಸಂತಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮನಪಾ ಸದಸ್ಯ ದಯಾನಂದ ಶೆಟ್ಟಿ, ಸಿವಿಲ್ ಗುತ್ತಿಗೆದಾರ ಮುಸ್ತಫ, ನೀನಾಸಂ ಕಲಾವಿದ ಗುರುಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News