ನಿರ್ಭೀತಿಯಿಂದ ದೂರು ನೀಡಿದರೆ ಭ್ರಷ್ಟಾಚಾರ ತೊಲಗಿಸಲು ಸಾಧ್ಯ : ಎಸಿಬಿ ಡಿವೈಎಸ್ಪಿ ದಿನಕರ್ ಶೆಟ್ಟಿ

Update: 2018-09-25 13:13 GMT

ಕುಂದಾಪುರ, ಸೆ.25: ಭ್ರಷ್ಟಾಚಾರ ಇಂದು ಗಂಭೀರ ಸಮಸ್ಯೆಯಾಗಿದ್ದು, ಜನ ನಿರ್ಭೀತಿಯಿಂದ ಮುಂದೆ ಬಂದು ದೂರು ನೀಡಿದರೆ ಇದನ್ನು ತೊಲಗಿ ಸಲು ಸಾಧ್ಯ ಎಂದು ಭ್ರಷ್ಟಾಚಾರ ನಿಗ್ರಹದಳದ ಉಡುಪಿ ಡಿವೈಎಸ್ಪಿ ದಿನಕರ್ ಶೆಟ್ಟಿ ಹೇಳಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಉಡುಪಿ ಪೊಲೀಸ್ ಠಾಣೆ, ಹೆಮ್ಮಾಡಿ ಗ್ರಾಪಂ, ಜೆಸಿಐ ಹೆಮ್ಮಾಡಿ ಘಟಕ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಮ್ಮಾಡಿ 'ಎ' ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಹೆಮ್ಮಾಡಿಯ ಹೆರಾಲ್ಡ್ ರೆಬೆಲ್ಲೋ ಸಭಾಭವನದಲ್ಲಿ ಸೋಮವಾರ ಆಯೋಜಿಸಲಾದ ಭ್ರಷ್ಟಾಚಾರ ನಿರ್ಮೂಲನಾ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಭ್ರಷ್ಟಾಚಾರದಿಂದ ದೇಶದ ಅರ್ಥವ್ಯವಸ್ಥೆಯೇ ಬುಡಮೇಲಾಗುವ ಸಾಧ್ಯತೆ ಇದೆ. ಇದರಿಂದ ನಾವು ಪಾವತಿಸುವ ತೆರಿಗೆ ಹಣ ಪೋಲಾಗುವುದಲ್ಲದೆ, ಮೂಲ ಸೌಕರ್ಯ ಒದಗಿಸಲು ತೊಂದರೆಯಾಗುತ್ತದೆ. ಆದುದರಿಂದ ಭ್ರಷ್ಟಾ ಚಾರ ನಿರ್ಮೂಲನೆಗೆ ಪ್ರತಿಯೊಬ್ಬರು ಕೂಡ ಕೈಜೋಡಿಸಬೇಕು. ನಮ್ಮ ಕೆಲಸಕ್ಕೆ ಯಾವುದೇ ಸರಕಾರಿ ಅಧಿಕಾರಿಗಳಿಗೂ ಲಂಚ ಕೊಡಬೇಕಾಗಿಲ್ಲ. ಇತ್ತೀಚೆಗೆ ಜಾರಿಗೆ ಬಂದ ಕಾನೂನು ಪ್ರಕಾರ ಲಂಚ ಪಡೆದವರೂ ಮಾತ್ರವಲ್ಲ, ಕೊಡುವವರೂ ಕೂಡ ಅಪರಾಧಿಗಳಾಗುತ್ತಾರೆ ಎಂದು ಅವರು ತಿಳಿಸಿದರು.

ಸರ್ವೇ ಪ್ರಕಾರ 180 ದೇಶಗಳ ಪೈಕಿ ಭ್ರಷ್ಟಾಚಾರದಲ್ಲಿ ಭಾರತ 81ನೇ ಸ್ಥಾನದಲ್ಲಿದೆ. ಅದರಂತೆ ಭಾರತಕ್ಕಿಂತ 100 ದೇಶಗಳಲ್ಲಿ ಕಡಿಮೆ ಭ್ರಷ್ಟಾಚಾರ ಇದೆ. ಏಷ್ಯಾದಲ್ಲಿ ಭಾರತವೇ ನಂ.1 ಆಗಿದ್ದು, ನೆರೆಯ ಪಾಕಿಸ್ಥಾನ 4ನೇ ಸ್ಥಾನದಲ್ಲಿದೆ. ದೇಶದ ಶೇ.69ರಷ್ಟು ಜನ ಈ ಭ್ರಷ್ಟಾಚಾರ ಪಿಡುಗಿನಿಂದ ಸಮಸ್ಯೆ ಎದುರಿಸು ತ್ತಿದ್ದು, ಪ್ರತಿ 4 ಮಂದಿಯ ಪೈಕಿ ಒಬ್ಬರಿಗೆ ಒಂದಲ್ಲ ಒಂದು ವಿಷಯದಲ್ಲಿ ಭ್ರಷ್ಟಾಚಾರದಿಂದ ತೊಂದರೆಯಾಗುತ್ತಿದೆ ಎಂದರು.

ಎಸಿಬಿಯ ಪೊಲೀಸ್ ನಿರೀಕ್ಷಕ ಜಯರಾಂ ಗೌಡ ಮಾತನಾಡಿ, ನಿಮ್ಮ ಸುತ್ತಮುತ್ತ ಎಲ್ಲಿಯೇ ಭ್ರಷ್ಟಾಚಾರ, ಲಂಚ ತೆಗೆದುಕೊಳ್ಳುವುದು ಗಮನಕ್ಕೆ ಬಂದರೆ ಎಸಿಬಿ ಠಾಣೆಗೆ ನೇರವಾಗಿ, ಪತ್ರದ ಮೂಲಕ ಅಥವಾ ಪೋನ್ ಮೂಲಕವಾದರೂ ದೂರು ಕೊಡಬಹುದು. ದೂರು ಕೊಟ್ಟವರ ಹೆಸರನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ. ಜನ ಲಂಚ ಕೊಡುವುದಿಲ್ಲ ಎಂದು ಕಠಿನ ನಿರ್ಧಾರ ತೆಗೆದುಕೊಂಡಾಗ ಮಾತ್ರ ಲಂಚ ಮುಕ್ತ ಸಮಾಜ ನಿರ್ಮಿಸಲು ಸಾಧ್ಯ ಎಂದರು.

ಅಧ್ಯಕ್ಷತೆಯನ್ನು ಜೆಸಿಐ ಹೆಮ್ಮಾಡಿ ಘಟಕದ ಅಧ್ಯಕ್ಷ ರಾಘವೇಂದ್ರ ಕುಲಾಲ್ ವಹಿಸಿದ್ದರು. ಹೆಮ್ಮಾಡಿ ಗ್ರಾಪಂ ಅಧ್ಯಕ್ಷೆ ಜ್ಯೋತಿ ಹರೀಶ್ ಭಂಡಾರಿ, ಜನತಾ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಪಿ.ಮೋಹನ್ ಶೆಟ್ಟಿ, ಒಕ್ಕೂಟದ ಅಧ್ಯಕ್ಷ ಯೋಗಿಶ್ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜಯ್ಯ ಬಿಲ್ಲವ, ಗ್ರಾಪಂ ಸದಸ್ಯರಾದ ಆನಂದ ಪಿ.ಎಚ್., ರಾಘವೇಂದ್ರ ಪೂಜಾರಿ ಉಪಸ್ಥಿತರಿದ್ದರು. ಶಿಕ್ಷಕ ಜಗದೀಶ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News