ದ.ಭಾರತ ಅಂತರ್ ವಿವಿ ಮಹಿಳಾ ಖೋಖೋ ಪಂದ್ಯಾಟ ಪೂರ್ವಭಾವಿ ಸಭೆ

Update: 2018-09-25 13:16 GMT

ಉಡುಪಿ, ಸೆ.25: ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಯೋಜಕತ್ವದಲ್ಲಿ ಅ.14ರಿಂದ 18ರವರೆಗೆ ಉಡುಪಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳಾ ಖೋ ಖೋ ಪಂದ್ಯಾಟದ ಪೂರ್ವಭಾವಿ ಸಭೆಯು ಸೆ.22ರಂದು ಕಾಲೇಜಿನಲ್ಲಿ ಜರಗಿತು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಉಡುಪಿ ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಪಂದ್ಯಾಟದಲ್ಲಿ ದಕ್ಷಿಣ ಭಾರತದ 55 ವಿಶ್ವವಿದ್ಯಾಲಯಗಳ ಸುಮಾರು 1200 ವಿದ್ಯಾರ್ಥಿನಿಯರು ಭಾಗವಹಿಸಲಿದ್ದು, ಅಂದಾಜು 10 ಲಕ್ಷ ರೂ. ಅಗತ್ಯವಿದೆ. ಮಂಗಳೂರು ವಿವಿ, ದಾನಿಗಳು ಮತ್ತು ಶಾಸಕರ ಸಹಕಾರದೊಂದಿಗೆ ಈ ಪಂದ್ಯಾಟವನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ವಿವಿಯ ಉಪಕುಲಪತಿ ಡಾ.ಕಿಶೋರ್ ಕುಮಾರ್ ಸಿ.ಕೆ ಮಾತನಾಡಿ, ಪಂದ್ಯಾಟಕ್ಕೆ ಮಂಗಳೂರು ವಿವಿ ವತಿಯಿಂದ ಸುಮಾರು ಐದು ಲಕ್ಷ ರೂ. ಅನುದಾನವನ್ನು ನೀಡಲಾಗುವುದು ಎಂದು ಘೋಷಿಸಿದರು.

ಉಡುಪಿ ಶಾಸಕ ರಘುಪತಿ ಭಟ್, ದಕ್ಷಿಣ ಕನ್ನಡ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಬೆಂಗಳೂರಿನ ಸಂಚಲನಾ ಟ್ರಸ್ಟ್ ಅಧ್ಯಕ್ಷ ಪ್ರೇಮ್‌ಪ್ರಸಾದ ಶೆಟ್ಟಿ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿ ದರು. ಜಿಪಂ ಅಧ್ಯಕ್ಷ ದಿನಕರ ಬಾಬು ಶುಭ ಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಾಪಕರ ಸಂಘದ ವತಿಯಿಂದ ಡಾ. ಕಿಶೋರ್ ಕುಮಾರ್ ಸಿ.ಕೆ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ವಿ.ವಿಯ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ವೇಣುಗೋಪಾಲ ನೊಂಡಾ, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಮಚಂದ್ರ ಪಾಟ್ಕರ್ ಉಪಸ್ಥಿತರಿದ್ದರು.

ಅಧ್ಯಾಪಕ ಸಂಘದ ಕಾರ್ಯದರ್ಶಿ ಸಹಾಯಕ ಪ್ರಾಧ್ಯಾಪಕ ಶೋಭಾ ಆರ್. ವಂದಿಸಿದರು. ರಾಜ್ಯಶಾಸ್ತ್ರ ವಿಬಾಗದ ಸಹಾಯಕ ಅಧ್ಯಾಪಕ ಎನ್.ನಿತ್ಯಾ ನಂದ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News