ಮುಂಗಾರು ಮಳೆಗೆ ತತ್ತರಿಸಿದ ಉತ್ತರ: ನೆರೆ, ಭೂಕುಸಿತಕ್ಕೆ 25 ಬಲಿ

Update: 2018-09-25 14:15 GMT

ಹೊಸದಿಲ್ಲಿ, ಸೆ.25: ಉತ್ತರದ ರಾಜ್ಯಗಳಲ್ಲಿ ಮಳೆಯು ಕೋಲಾಹಲ ಎಬ್ಬಿಸಿದ್ದು ನೆರೆ, ಭೂಕುಸಿತಕ್ಕೆ ಸಿಲುಕಿ ಇದುವರೆಗೆ 25 ಮಂದಿ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಎಂಟು ಮಂದಿ ಅಸುನೀಗಿದ್ದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಏಳು, ಪಂಜಾಬ್‌ನಲ್ಲಿ ಆರು ಮತ್ತು ಹರ್ಯಾಣದಲ್ಲಿ ನಾಲ್ಕು ಮಂದಿ ಬಲಿಯಾಗಿದ್ದಾರೆ. ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆ ಮಳೆಯಿಂದ ಹೆಚ್ಚಿನ ಹಾನಿಗೆ ಒಳಗಾಗಿದ್ದು ಇಲ್ಲಿ ಕಟ್ಟೆಚ್ಚರ ಘೊಷಿಸಲಾಗಿದೆ. ಚಂಡಿಗಡ-ಮನಾಲಿ ಹೆದ್ದಾರಿ ಮತ್ತು ಪಠಾಣ್‌ಕೋಟ್-ಚಂಬ ಹೆದಾರಿ ಭೂಕುಸಿತದಿಂದ ಸಂಪರ್ಕ ಕಡಿದುಕೊಂಡಿದೆ.

ರವಿವಾರ ರಾತ್ರಿ ಮನಾಲಿಯಲ್ಲಿ ವಾಹನವೊಂದು ತುಂಬಿ ಹರಿಯುತ್ತಿದ್ದ ಬಿಯಾಸ್ ನದಿಗೆ ಬಿದ್ದ ಪರಿಣಾಮ ಅದರೊಳಗಿದ್ದ ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮೂವರು ಪರ್ಬತಿ ನದಿಗೆ ಆಹುತಿಯಾದರೆ ಒಬ್ಬಳು ಯುವತಿ ಬಜೌರಾದಲ್ಲಿ ಸಾವನ್ನಪ್ಪಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಯಸ್ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಕುಲ್ಲುವಿನಲ್ಲಿ ಹಲವು ಮನೆಗಳು ನೆರೆನೀರಿನಲ್ಲಿ ಕೊಚ್ಚಿ ಹೋಗಿವೆ. ಸರಕಾರ ಮನವಿಯ ಮೇರೆಗೆ ಯಾವುದೇ ರೀತಿಯ ತುರ್ತುಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಕುಲ್ಲು ಪಟ್ಟಣದಲ್ಲಿ ವಾಯುಪಡೆಯು ಹೆಲಿಕಾಪ್ಟರನ್ನು ನಿಲ್ಲಿಸಿದೆ. ಸರಕಾರ ಕುಲ್ಲು, ಕನೌರ್ ಮತ್ತು ಲಹೌಲ್ ಸ್ಪಿತಿ ಜಿಲ್ಲೆಗಳ ಎತ್ತರದ ಪ್ರದೇಶಗಳಲ್ಲಿ ಹಿಮಮಳೆ ಸುರಿದಿದೆ. ಚಂಬ, ಕುಲ್ಲು, ಸಿರ್ವೌರ್, ಕಾಂಗ್ರಾ, ಮತ್ತು ಹಮಿರ್ಪುರ್‌ನ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News