19 ವರ್ಷಗಳ ಹಿಂದಿನ ಕೊಲೆ ಪ್ರಕರಣ: ಆದಿತ್ಯನಾಥ್ ವಿರುದ್ಧ ನ್ಯಾಯಾಲಯದಿಂದ ನೋಟಿಸ್

Update: 2018-09-25 14:17 GMT

ಲಕ್ನೋ.ಸೆ.15: 19 ವರ್ಷಗಳಷ್ಟು ಹಿಂದಿನ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ನೋಟಿಸ್ ಜಾರಿಗೆ ಮಹಾರಾಜಗಂಜ್‌ನ ಸೆಷನ್ಸ್ ನ್ಯಾಯಾಲಯವು ಮಂಗಳವಾರ ಆದೇಶಿಸಿದೆ. ಈ ಬೆಳವಣಿಗೆಯು ಆದಿತ್ಯನಾಥ್ ಅವರಿಗೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ.

1999ರಲ್ಲಿ ಸಮಾಜವಾದಿ ಪಾರ್ಟಿಯು ಆಯೋಜಿಸಿದ್ದ ಪ್ರತಿಭಟನೆ ಸಂದರ್ಭದಲ್ಲಿ ಪಕ್ಷದ ಆಗಿನ ನಾಯಕ ತಲತ್ ಅಝೀಝ್ ಅವರ ಖಾಸಗಿ ಭದ್ರತಾ ಅಧಿಕಾರಿ ಸತ್ಯಪ್ರಕಾಶ ಯಾದವ ಅವರು ಕೊಲ್ಲಲ್ಪಟ್ಟಿದ್ದರು. ಪೊಲೀಸ್ ಕಡತಗಳಲ್ಲಿ ಉಲ್ಲೇಖಿಸಿರುವಂತೆ ಆದಿತ್ಯನಾಥ್ ನೇತೃತ್ವ ವಹಿಸಿದ್ದರೆನ್ನಲಾದ ಗುಂಪೊಂದು ಹಾರಿಸಿದ್ದ ಗುಂಡುಗಳಿಗೆ ಯಾದವ ಬಲಿಯಾಗಿದ್ದರು.

ಪ್ರಕರಣಕ್ಕೆ ಮರುಜೀವ ನೀಡುವಂತೆ ಕೋರಿ ಅಝೀಝ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಈ ವರ್ಷದ ಮಾರ್ಚ್‌ನಲ್ಲಿ ಸೆಷನ್ಸ್ ನ್ಯಾಯಾಲಯವು ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಅವರು ಲಕ್ನೋ ಉಚ್ಚ ನ್ಯಾಯಾಲಯದಲ್ಲಿ ಪುನರ್‌ಪರಿಶೀಲನೆ ಅರ್ಜಿಯನ್ನು ಸಲ್ಲಿಸಿದ್ದು, ಅದು ವಿಚಾರಣೆಯನ್ನು ಪುನರಾರಂಭಿಸುವಂತೆ ಸೆಷನ್ಸ್ ನ್ಯಾಯಾಲಯಕ್ಕೆ ಆದೇಶಿಸಿತ್ತು.

 ಇದೀಗ ಪ್ರಕರಣದ ಮುಂದಿನ ವಿಚಾರಣೆಗಾಗಿ ಆದಿತ್ಯನಾಥ್ ಮತ್ತು ಇತರರು ಸೇರಿದಂತೆ ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಮಹಾರಾಜಗಂಜ್ ಸೆಷನ್ಸ್ ನ್ಯಾಯಾಲಯವು ಆದೇಶಿಸಿದೆ. ನ್ಯಾಯಾಲಯವು ನೋಟಿಸ್‌ಗೆ ಉತ್ತರಿಸಲು ಆದಿತ್ಯನಾಥ್ ಗೆ ಒಂದು ವಾರ ಕಾಲಾವಕಾಶವನ್ನೂ ನೀಡಿದೆ. 2019ರ ಲೋಕಸಭಾ ಚುನಾವಣೆಗೆ ಮುನ್ನ ರಾಜಕೀಯವು ಕಾವೇರುತ್ತಿರುವ ಈ ಸಂದರ್ಭದಲ್ಲಿ ಎರಡು ದಶಕಗಳಷ್ಟು ಹಳೆಯದಾದ ಈ ಪ್ರಕರಣ ಕೋಲಾಹಲಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

ವಿಚಾರಣೆ ಮತ್ತು ಪ್ರಕರಣದಲ್ಲಿನ ಸಂತ್ರಸ್ತರು ರಾಜಕೀಯ ಪ್ರಭಾವಕ್ಕೆ ಬಲಿಯಾಗುವ ಸಾಧ್ಯತೆಯಿರುವುದರಿಂದ ಆದಿತ್ಯನಾಥ್ ಅವರು ತಕ್ಷಣವೇ ಹುದ್ದೆಗೆ ರಾಜೀನಾಮೆ ಸಲ್ಲಿಸಬೇಕು ಎಂದು ಪ್ರತಿಪಕ್ಷಗಳಾದ ಎಸ್‌ಪಿ ಮತ್ತು ಕಾಂಗ್ರೆಸ್ ಈಗಾಗಲೇ ಆಗ್ರಹಿಸಿವೆ.

ಆದಿತ್ಯನಾಥ್ ವಿರುದ್ಧ ಕೆಲವು ಗಂಭೀರ ಆರೋಪಗಳಿವೆ ಮತ್ತು ಈಗ ಕೊಲೆ ಪ್ರಕರಣದಲ್ಲಿ ಅವರ ವಿರುದ್ಧ ನೋಟಿಸ್ ಹೊರಡಿಸಲು ನ್ಯಾಯಾಲಯವೂ ಆದೇಶಿಸಿದೆ. ವಿಚಾರಣೆ ಆರಂಭಗೊಂಡರೆ ಆದಿತ್ಯನಾಥ್ ಅದರ ಮೇಲೆ ಪ್ರಭಾವ ಬೀರಬಹುದು ಮತ್ತು ಸಂತ್ರಸ್ತರಿಗೆ ಹಾನಿಯನ್ನುಂಟು ಮಾಡಬಹುದು. ಹೀಗಾಗಿ ಅವರ ತಕ್ಷಣ ರಾಜೀನಾಮೆಗೆ ನಾವು ಆಗ್ರಹಿಸುತ್ತಿದ್ದೇವೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಪಿ ವಕ್ತಾರ ಸುನಿಲ ಸಿಂಗ್ ಸಾಜನ್ ಹೇಳಿದರೆ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ವಿರುದ್ಧ ಕೆಲವು ಗಂಭೀರ ಪ್ರಕರಣಗಳು ದಾಖಲಾಗಿವೆ ಮತ್ತು ಇವು ರಾಜಕೀಯ ಪ್ರೇರಿತವೆಂದು ಬಣ್ಣಿಸುವ ಮೂಲಕ ಅವುಗಳಿಂದ ನಣುಚಿಕೊಳ್ಳಲು ಉಭಯ ನಾಯಕರು ಪ್ರಯತ್ನಿಸುತ್ತಿದ್ದಾರೆ. ವಿಚಾರಣೆಯು ಜಾರಿಯಲ್ಲಿರುವ ವರೆಗೂ ಆದಿತ್ಯನಾಥ್ ಅವರು ಹುದ್ದೆಯಿಂದ ಕೆಳಗಿಳಿಯಬೇಕು, ಇಲ್ಲದಿದ್ದರೆ ಅವರು ಸಂತ್ರಸ್ತರನ್ನು ಬೆದರಿಸಬಹುದು ಮತ್ತು ಅವರ ಮೇಲೆ ಪ್ರಭಾವ ಬೀರಬಹುದು. ಬಿಜೆಪಿ 300ಕ್ಕೂ ಅಧಿಕ ಶಾಸಕರನ್ನು ಹೊಂದಿದ್ದರೂ ಮುಖ್ಯಮಂತ್ರಿ ಹುದ್ದೆಗೆ ನಿಷ್ಕಳಂಕ ಹಿನ್ನೆಲೆಯ ವ್ಯಕ್ತಿಯನ್ನು ಹುಡುಕಲು ಅದಕ್ಕೆ ಸಾಧ್ಯವಾಗಲಿಲ್ಲ ಎನ್ನುವುದು ದಯನೀಯವಾಗಿದೆ ಎಂದು ಉ.ಪ್ರ.ಕಾಂಗ್ರೆಸ್ ವಕ್ತಾರ ಅಂಶು ಅವಸ್ಥಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News