ಪಾರಿಕ್ಕರ್ ಅವರನ್ನು ಸಿಎಂ ಹುದ್ದೆಯಲ್ಲಿ ಮುಂದುವರಿಸಿರುವುದು ಬಿಜೆಪಿಯ ಕ್ರೂರ ರಾಜಕೀಯ: ಶಿವಸೇನೆ

Update: 2018-09-25 14:49 GMT

ಮುಂಬೈ, ಸೆ. 25: ಅನಾರೋಗ್ಯಕ್ಕೀಡಾದ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರನ್ನು ಉಳಿಸಿಕೊಂಡಿರುವುದಕ್ಕೆ ತನ್ನ ಮಿತ್ರ ಪಕ್ಷವಾದ ಬಿಜೆಪಿಯನ್ನು ಗುರುವಾರ ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ, ಇದು ಬಿಜೆಪಿಯ ಅಮಾನವೀಯ ರಾಜಕೀಯ ಎಂದಿದೆ ಹಾಗೂ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳವ ಭೀತಿ ಬಿಜೆಪಿಗೆ ಉಂಟಾಗಿದೆ ಎಂದು ತಿಳಿಸಿದೆ.

ಪಾರಿಕ್ಕರ್ ಗೈರಿನಿಂದ ಕರಾವಳಿ ರಾಜ್ಯದಲ್ಲಿ ಅರಾಜಕತೆ ಉಂಟಾಗಿದೆ ಎಂದು ಪ್ರತಿಪಾದಿಸಿದ ಶಿವಸೇನೆ, ಸೂಕ್ತರಾದ ಯಾರೊಬ್ಬರೂ ಇಲ್ಲದೇ ಇರುವುದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಪಾರಿಕ್ಕರ್ ಬದಲಾಗಿ ಬೇರೊಬ್ಬರನ್ನು ನಿಯೋಜಿಸುವಲ್ಲಿ ಪಕ್ಷ ಸಮಸ್ಯೆ ಎದುರಿಸುತ್ತಿದೆ ಎಂದು ಶಿವಸೇನೆ ಹೇಳಿದೆ.

62ರ ಹರೆಯದ ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಪೇಂಕ್ರಿಯಾಸ್ ಕಾಯಿಲೆ ಹಿನ್ನೆಲೆಯಲ್ಲಿ ಹೊಸದಿಲ್ಲಿಯ ಎಐಐಎಂಎಸ್‌ನಲ್ಲಿ ದಾಖಲಾಗಿದ್ದಾರೆ. ‘‘ಪಾರಿಕ್ಕರ್ ಅವರು ಗೋವಾದಲ್ಲಿ ಇಲ್ಲ. ಅವರು ದಿಲ್ಲಿಯಲ್ಲಿರುವ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಅವರ ಅನುಪಸ್ಥಿತಿಯಿಂದ ರಾಜ್ಯದ ಆಡಳಿತ ಡೋಲಾಯಮಾನ ವಾಗಿದೆ.’’ ಎಂದು ಶಿವಸೇನೆ ತನ್ನ ಮುಖವಾಣಿಯಾದ ಸಾಮ್ನಾದಲ್ಲಿ ಪ್ರತಿಪಾದಿಸಿದೆ.

ಮನೋಹರ್ ಪಾರಿಕ್ಕರ್ ಅವರನ್ನು ಮುಖ್ಯಮಂತ್ರಿಯಾಗಿ ಉಳಿಸಿಕೊಂಡು ಅಧಿಕಾರ ನಡೆಸುತ್ತಿರುವುದು ಕೇವಲ ಗೋವಾಕ್ಕೆ ಮಾತ್ರ ಮಾಡುತ್ತಿರುವ ಅನ್ಯಾಯ ಅಲ್ಲ. ಪಾರಿಕ್ಕರ್ ಅವರಿಗೂ ಮಾಡುತ್ತಿರುವ ಅನ್ಯಾಯ. ಬಲವಂತವಾಗಿ ಅವರನ್ನು ಹುದ್ದೆಯಲ್ಲಿ ಮುಂದುವರಿಸು ವುದು ಕ್ರೂರ ಹಾಗೂ ಅಮಾನವೀಯ ರಾಜಕೀಯ.

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ವರೆಗೆ ಪಾರಿಕ್ಕರ್ ಹೆಸರಲ್ಲಿ ಸಮಯ ಕಳೆಯಲು ಬಿಜೆಪಿ ಬಯಸುತ್ತಿದೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ ಶಿವಸೇನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News