ಪಾರಿಕ್ಕರ್‌ಗೆ ಬೆಂಬಲ ನೀಡಿರುವ ಪಕ್ಷೇತರ ಶಾಸಕನಿಂದ ಜಿಎಸ್‌ಎಫ್‌ಡಿಸಿಗೆ ರಾಜೀನಾಮೆ

Update: 2018-09-25 17:22 GMT

ಪಣಜಿ,ಸೆ.25: ಗೋವಾದಲ್ಲಿನ ಮನೋಹರ್ ಪಾರಿಕ್ಕರ್ ಸರಕಾರಕ್ಕೆ ಬೆಂಬಲವನ್ನು ನೀಡಿರುವ ಪಕ್ಷೇತರ ಶಾಸಕ ಪ್ರಸಾದ ಗಾಂವಕರ್(ಸಾಂಗ್ವೆ) ಅವರು ಮಂಗಳವಾರ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರದ ಕಾರ್ಯವೈಖರಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ, ಜೊತೆಗೆ ಗೋವಾ ಅರಣ್ಯಾಭಿವೃದ್ಧಿ ನಿಗಮ(ಜಿಎಸ್‌ಎಫ್‌ಡಿಸಿ)ದ ಅಧ್ಯಕ್ಷ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ಅನಾರೋಗ್ಯದಿಂದಾಗಿ ದಿಲ್ಲಿಯ ಏಮ್ಸ್‌ಗೆ ದಾಖಲಾಗಿರುವ ಮುಖ್ಯಮಂತ್ರಿ ಪಾರಿಕ್ಕರ್ ಅವರ ಅನುಪಸ್ಥಿತಿಯಿಂದಾಗಿ ಇಡೀ ಆಡಳಿತವೇ ಸ್ಥಗಿತಗೊಂಡಿದೆ ಎಂದು ಗಾಂವಕರ್ ಹೇಳಿದರು.

ಬಿಜೆಪಿ ನೇತೃತ್ವದ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂದೆಗೆದುಕೊಳ್ಳುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು, ಕ್ಷೇತ್ರದ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕವೇ ಸರಕಾರದ ಕುರಿತು ನಿರ್ಧಾರವನ್ನು ಕೈಗೊಳ್ಳುತ್ತೇನೆ ಎಂದು ಉತ್ತರಿಸಿದರು.

ಗಾಂವಕರ್ ಸೇರಿದಂತೆ ಮೂವರು ಪಕ್ಷೇತರ ಶಾಸಕರು ಪಾರಿಕ್ಕರ್ ಸರಕಾರವನ್ನು ಬೆಂಬಲಿಸುತ್ತಿದ್ದಾರೆ. ಉಳಿದಂತೆ ತಲಾ ಮೂವರು ಶಾಸಕರನ್ನು ಹೊಂದಿರುವ ಎಂಜಿಪಿ ಮತ್ತು ಜಿಎಫ್‌ಪಿ ಹಾಗೂ ಓರ್ವ ಶಾಸಕರನ್ನು ಹೊಂದಿರುವ ಎನ್‌ಸಿಪಿ ಸರಕಾರವನ್ನು ಬೆಂಬಲಿಸುತ್ತಿವೆ. 40 ಸದಸ್ಯಬಲದ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ 14 ಮತ್ತು ಕಾಂಗ್ರೆಸ್ 16 ಶಾಸಕರನ್ನು ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News