ಕನ್ನಡ ಚಲನಚಿತ್ರರಂಗದ ಮಾನ ಹರಾಜು ಮಾಡುವವರು

Update: 2018-09-25 18:26 GMT

ಮಾನ್ಯರೇ,

 ಕನ್ನಡ ಚಲನಚಿತ್ರಗಳಿಗೆ ಮತ್ತು ಕನ್ನಡ ನಟ, ನಟಿಯರಿಗೆ ದೇಶದಲ್ಲಿ ಗೌರವ, ಅಭಿಮಾನ ಇದೆ. ಏಕೆಂದರೆ ಹಿಂದಿನ ಕಾಲದ ನಟರೆಲ್ಲ ಸರಳ, ಸಜ್ಜನಿಕೆ, ಮೇರು ವ್ಯಕ್ತಿತ್ವದೊಂದಿಗೆ ಸದ್ಗುಣಗಳನ್ನು ಹೊಂದಿದವರು. ತಮ್ಮ ಚಲನಚಿತ್ರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದವರು. ಈ ಮೇರು ನಟ, ನಟಿಯರು ಅಭಿನಯಿಸಿದ ಹತ್ತು ಹಲವು ಚಿತ್ರಗಳು ದೇಶದ ಜನತೆಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡಿವೆ. ಅಲ್ಲದೆ ಅದೆಷ್ಟೋ ಅಭಿಮಾನಿಗಳು ಈ ಮೇರು ಕಲಾವಿದರ ಚಿತ್ರಗಳನ್ನು ನೋಡಿ ತಮ್ಮ ಬದುಕು ಬದಲಾಯಿಸಿಕೊಂಡು ದುಶ್ಚಟಗಳಿಂದ ದೂರವಾಗಿದ್ದರು. ಅಂದಿನ ಹೆಚ್ಚಿನ ನಟ,ನಟಿಯರು ಸಿನೆಮಾಗಳಲ್ಲಿ ಒಳ್ಳೆಯತನ ಮೆರೆಯುವಂತೆ ನಿಜ ಜೀವನದಲ್ಲೂ ಅದರಂತೆ ಬಾಳಿ ಬದುಕಿದವರು. ಅಲ್ಲದೆ ಕನ್ನಡ ನಾಡು, ನುಡಿ, ನೆಲ, ಜಲದ ವಿಷಯದಲ್ಲಿ ತೊಂದರೆ ಉಂಟಾದರೆ ಕನ್ನಡಿರ ಪರವಾಗಿ ಧ್ವನಿಯೆತ್ತುವ ಮೂಲಕ ಕನ್ನಡಕ್ಕಾಗಿ ಶ್ರಮಿಸಿದ್ದಾರೆ. ತಮ್ಮಿಂದಾದಷ್ಟು ಸಮಾಜ ಸೇವೆ ಮಾಡುತ್ತಾ ನಾಡಿನ ಜನರೊಂದಿಗೆ ಅತ್ಯುತ್ತಮ ಬಾಂಧವ್ಯ ಇರಿಸಿಕೊಂಡು, ಕನ್ನಡ ಚಲನಚಿತ್ರರಂಗವನ್ನು ಶ್ರೀಮಂತಗೊಳಿಸಿದ್ದಾರೆ.
ಆದರೆ ಇಂದಿನ ಕನ್ನಡ ಚಲನಚಿತ್ರ ಕ್ಷೇತ್ರ ಅಂದಿನಂತೆ ಉಳಿದುಕೊಂಡಿಲ್ಲ. ಇಂದಿನ ಹೆಚ್ಚಿನ ನಟ,ನಟಿಯರು ಸಮಾಜಕ್ಕಾಗಲಿ, ಅಭಿಮಾನಿಗಳಿಗಾಗಲಿ ಆದರ್ಶ, ಸ್ಫೂರ್ತಿ, ಪ್ರೇರಣೆ ನೀಡುವಂತಹ ಯಾವುದೇ ಚಿತ್ರಗಳನ್ನಾಗಲಿ ಅಥವಾ ತಮ್ಮ ನಿಜಜೀವನದಲ್ಲಾಗಲಿ ಅಂತಹ ಸಮಾಜಮುಖಿ ಕೆಲಸಗಳಿಗೆ ಮುಂದಾಗುತ್ತಿಲ್ಲ. ಬರೀ ಮಚ್ಚು, ಲಾಂಗು, ಕೋಮು ದ್ವೇಷ, ಪ್ರೇಮ-ಕಾಮಗಳ ಸಿನೆಮಾಗಳನ್ನು ಮಾಡುತ್ತ ಸಮಾಜದ ಯುವ ಜನತೆಗೆ ಪ್ರಚೋದನೆ ನೀಡಿ ಅವರ ದಾರಿ ತಪ್ಪಿಸುತ್ತಿದ್ದಾರೆ. ಇಂದಿನ ಕನ್ನಡ ಚಲನಚಿತ್ರ ನಟ,ನಟಿಯರಲ್ಲಿ ಬರೀ ಬಣರಾಜಕೀಯ, ಅಸೂಯೆ, ಪರಸ್ಪರ ಆರೋಪ-ಪ್ರತ್ಯಾರೋಪ, ದ್ವೇಷದ ಭಾವನೆಗಳು ಹೆಚ್ಚುತ್ತಿದ್ದು, ಲೈಂಗಿಕ ಕಿರುಕುಳ, ಪತಿ ಪತ್ನಿಯ ನಡುವಿನ ವೈಮನಸ್ಸಿನ ಜಗಳ, ಅಮಾಯಕರ ಮೇಲೆ ದಬ್ಬಾಳಿಕೆ, ಬೆದರಿಕೆ, ಹಲ್ಲೆಗಳಿಂದಲೇ ಇವರು ದಿನನಿತ್ಯ ಸುದ್ದಿಯಾಗುತ್ತಿದ್ದಾರೆ. ಇದರಿಂದಾಗಿ ಜನತೆ ಕನ್ನಡ ಚಿತ್ರ ಮತ್ತು ಕನ್ನಡ ನಟ ನಟಿಯರ ಮೇಲೆ ಇದ್ದ ಪ್ರೀತಿ, ವಿಶ್ವಾಸ, ಗೌರವ, ನಂಬಿಕೆ, ಅಭಿಮಾನ ಕಳೆದುಕೊಳ್ಳುವಂತಾಗಿದೆೆ. ಇಂದಿನ ನಾಯಕ ನಟ ನಟಿಯರ ದುರ್ವರ್ತನೆಯಿಂದ ಕನ್ನಡ ಚಲನಚಿತ್ರರಂಗದ ಮಾನ ಮರ್ಯಾದೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹಾಳಾಗುತ್ತಿದೆ. ಆದ್ದರಿಂದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಇನ್ನ್ನು ಮುಂದಕ್ಕಾದರೂ ಎಚ್ಚ್ಚೆತ್ತುಕೊಳ್ಳಬೇಕಿದೆ. ಎಷ್ಟೇ ಹೆಸರು ಮಾಡಿದ ನಟ ನಟಿಯರಿರಲಿ, ದುರ್ವರ್ತನೆ ತೋರಿದರೆ ಆ ಕ್ಷಣವೇ ಅವರ ಮೇಲೆ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲವೇ ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸದಂತೆ ನಿಷೇಧ ಹೇರಬೇಕು. ಹಿರಿಯ ನಟರು ಕಾಪಾಡಿಕೊಂಡು ಬಂದಿರುವ ಕನ್ನಡ ಚಿತ್ರರಂಗದ ಹೆಸರನ್ನು ಉಳಿಸಿ ಬೆಳೆಸಲು ಇಂದಿನ ನಟ, ನಟಿಯರು ಗಂಭೀರವಾಗಿ ಚಿಂತಿಸಿಯಾರೇ?.
 

Writer - -ಮೌಲಾಲಿ ಕೆ ಆಲಗೂರ, ಸಿಂದಗಿ

contributor

Editor - -ಮೌಲಾಲಿ ಕೆ ಆಲಗೂರ, ಸಿಂದಗಿ

contributor

Similar News