ಅಂತರ್‌ರಾಷ್ಟ್ರೀಯ ಬಾಕ್ಸಿಂಗ್ ಕೂಟ: ಸಂದೀಪ್ ಕೌರ್‌ಗೆ ಚಿನ್ನ

Update: 2018-09-25 18:26 GMT

ಚಂಡಿಗಡ, ಸೆ.25: ಯುವ ಬಾಕ್ಸಿಂಗ್ ತಾರೆ ಸಂದೀಪ್ ಕೌರ್ ಪೊಲೆಂಡ್‌ನಲ್ಲಿ ನಡೆದ 13ನೇ ಆವೃತ್ತಿಯ ಅಂತರ್‌ರಾಷ್ಟ್ರೀಯ ಸಿಲೆಸಿಯಾನ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 52 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

ಸಂದೀಪ್ ಪದಕ ಸುತ್ತಿನಲ್ಲಿ ಪೊಲೆಂಡ್‌ನ ಕರೊಲಿನಾ ಅಂಪುಸ್ಕಾರನ್ನು 5-0 ಅಂತರದಿಂದ ಮಣಿಸಿದರು.

ಪಟಿಯಾಲದ ಹಸ್ಸಾನ್‌ಪುರ ಹಳ್ಳಿಯಲ್ಲಿ ಜನಿಸಿರುವ 16ರ ಹರೆಯದ ಕೌರ್‌ಗೆ ಯಶಸ್ಸು ಸುಲಭದಲ್ಲಿ ಲಭಿಸಿಲ್ಲ. ಬಡ ಕುಟುಂಬದಿಂದ ಬಂದಿರುವ ಕೌರ್ ಹೋರಾಟದಿಂದಲೇ ಮೇಲೆ ಬಂದಿದ್ದಾರೆ. ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ಹೆಚ್ಚಾದಾಗ ಹಳ್ಳಿಯ ಜನರು ಹಾಗೂ ಆಕೆಯ ಹೆತ್ತವರು ಕ್ರೀಡೆಯನ್ನು ತೊರೆಯುವಂತೆ ಒತ್ತಾಯಿಸಿದ್ದರು. ಸಂದೀಪ್ ಬಾಕ್ಸಿಂಗ್‌ನಲ್ಲಿ ತೊಡಗಿಸಿಕೊಂಡಿರುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು.

ಸಂದೀಪ್ ತಂದೆ ಸರ್ದಾರ್ ಜಸ್ವಿರ್ ಸಿಂಗ್ ಪಟಿಯಾಲ ನಗರದಲ್ಲಿ ಆಟೋ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದಾರೆ. ಸಿಂಗ್ ಸಂಪಾದನೆ ಕುಟುಂಬದ ಹಸಿವು ನೀಗಿಸಲು ಸಾಕಾಗುತ್ತಿರಲಿಲ್ಲ. ಆದರೆ, ಪುತ್ರಿ ಕೌರ್ ಬಾಕ್ಸಿಂಗ್‌ನ್ನು ತೊರೆಯದಂತೆ ಎಲ್ಲ ಪ್ರಯತ್ನ ನಡೆಸಿದ್ದರು.

ಚಿಕ್ಕಪ್ಪ ಸಿಮ್ರನ್‌ಜಿತ್ ಸಿಂಗ್ ಸಂದೀಪ್ ಕೌರ್‌ಗೆ ಬಾಕ್ಸಿಂಗ್ ಆಯ್ದುಕೊಳ್ಳಲು ಪ್ರೇರಣೆಯಾಗಿದ್ದರು. ‘‘ನಾನು ಚಿಕ್ಕಪ್ಪನೊಂದಿಗೆ ನಮ್ಮ ಹಳ್ಳಿಯ ಸಮೀಪದ ಬಾಕ್ಸಿಂಗ್ ಅಕಾಡಮಿಗೆ ತೆರಳುತ್ತಿದ್ದೆ. ಆಗ ನಾನು ಬಾಲಕಿಯಾಗಿದ್ದೆ. ಅಕಾಡಮಿಯಲ್ಲಿ ಹಲವು ಯುವ ಬಾಕ್ಸರ್‌ಗಳನ್ನು ನೋಡಿದ್ದೆ. ನಿಧಾನವಾಗಿ ಕ್ರೀಡೆಯತ್ತ ನನ್ನ ಆಸಕ್ತಿ ಬೆಳೆಯಿತು. 8ನೇ ವಯಸ್ಸಿನಲ್ಲಿ ನಾನು ಮೊದಲ ಬಾರಿ ಬಾಕ್ಸಿಂಗ್ ಗ್ಲೌಸ್‌ನ್ನು ಕೈಗೆತ್ತಿಕೊಂಡು ತರಬೇತಿ ಆರಂಭಿಸಿದ್ದೆ’’ ಎಂದು ಸಂದೀಪ್ ಕೌರ್ ಬಾಲ್ಯದ ನೆನಪನ್ನು ತೆರೆದಿಟ್ಟರು.

ಸಂದೀಪ್ ಕೌರ್ ಕೋಚ್ ಸುನೀಲ್ ಕುಮಾರ್ ಅವರೊಂದಿಗೆ ಬಾಕ್ಸಿಂಗ್ ಅಕಾಡಮಿಯಲ್ಲಿ ತರಬೇತಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News