ಫೀಲ್ಡಿಂಗ್ ಬದಲಿಸುವಂತೆ ಹೇಳಿದ ಕುಲ್‌ದೀಪ್‌ಗೆ ಬೆದರಿಸಿದ ಧೋನಿ!

Update: 2018-09-26 11:41 GMT

ದುಬೈ, ಸೆ.26: ಮಹೇಂದ್ರ ಸಿಂಗ್ ಧೋನಿ ಮೈದಾನದಲ್ಲಿ ಯಾವಾಗಲೂ ತಾಳ್ಮೆ ಕಳೆದುಕೊಳ್ಳದೆ ಶಾಂತಚಿತ್ತದಿಂದ ಎಲ್ಲವನ್ನೂ ನಿಭಾಯಿಸುತ್ತಾರೆ. ಧೋನಿ ಅವರ ಈ ಸ್ವಭಾವವೇ ಭಾರತಕ್ಕೆ ಹಲವು ಬಾರಿ ಪಂದ್ಯದಲ್ಲಿ ಮೇಲುಗೈ ಸಾಧಿಸಲು ನೆರವಾಗಿದೆ. ಆದರೆ, ಮಂಗಳವಾರ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧ ಏಶ್ಯಕಪ್‌ನ ಸೂಪರ್-4 ಪಂದ್ಯದಲ್ಲಿ ಧೋನಿ ಕೋಪಗೊಂಡಿದ್ದನ್ನು ನೋಡಿ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ.

ಪಂದ್ಯದ ವೇಳೆ ಭಾರತದ ಸ್ಪಿನ್ನರ್ ಕುಲ್‌ದೀಪ್ ಯಾದವ್ ಅವರು ನಾಯಕ ಧೋನಿಯ ಬಳಿ ಫೀಲ್ಡಿಂಗ್‌ನ್ನು ಬದಲಿಸುವಂತೆ ಕೇಳಿಕೊಂಡರು. ಆದರೆ, 2011ರ ವಿಶ್ವಕಪ್ ವಿಜೇತ ತಂಡದ ನಾಯಕ ಧೋನಿ ಸ್ಪಿನ್ನರ್ ಯಾದವ್ ಹೇಳಿದಂತೆ ಫೀಲ್ಡಿಂಗ್ ನಿಯೋಜಿಸಲು ಮುಂದಾಗಲಿಲ್ಲ. ಯಾದವ್ ಬಳಿ ತೆರಳಿದ ಧೋನಿ,‘‘ಸುಮ್ಮನೇ, ಬೌಲಿಂಗ್ ಮಾಡುತ್ತಿಯೋ ಇಲ್ಲವೇ ಬೌಲರ್‌ನ್ನು ಬದಲಿಸಲೋ’’ ಎಂದು ಬೆದರಿಸಿದರು. ಧೋನಿಯ ಈ  ಮಾತಿನಿಂದ ಅಸಮಾಧಾನಗೊಂಡ ಯಾದವ್ ಮರು ಮಾತನಾಡದೇ ಬೌಲಿಂಗ್ ಮುಂದುವರಿಸಿದರು.

ಧೋನಿ ಅವರು ಯಾದವ್‌ಗೆ ಎಚ್ಚರಿಕೆ ನೀಡುತ್ತಿರುವುದು ಸ್ಟಂಪ್ ಮೈಕ್ರೊಫೋನ್‌ನಲ್ಲಿ ಧ್ವನಿಮುದ್ರಿತವಾಗಿದೆ.

ಅಫ್ಘಾನಿಸ್ತಾನ ವಿರುದ್ಧ ಪಂದ್ಯ ನಾಯಕನಾಗಿ ಧೋನಿಗೆ 200ನೇ ಪಂದ್ಯವಾಗಿತ್ತು. 2 ವರ್ಷಗಳ ಹಿಂದೆ ನ್ಯೂಝಿಲೆಂಡ್ ವಿರುದ್ಧ ಕೊನೆಯ ಬಾರಿ ಭಾರತದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಧೋನಿ ಎಲ್ಲ ಮಾದರಿಯ ಕ್ರಿಕೆಟ್‌ನ ಯಶಸ್ವಿ ನಾಯಕನಾಗಿದ್ದಾರೆ. 37ರ ಹರೆಯದ ಧೋನಿ ನಾಯಕನಾಗಿ 200 ಏಕದಿನ ಪಂದ್ಯಗಳಲ್ಲಿ ಆಡಿದ್ದು ಈ ಪೈಕಿ 110ರಲ್ಲಿ ಜಯ ಹಾಗೂ 74ರಲ್ಲಿ ಸೋಲು ಕಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News