ಭಾರತದಲ್ಲಿ 1,000 ಕೋಟಿ ರೂ. ಕ್ಲಬ್ ಗೆ 214 ಶ್ರೀಮಂತರ ಸೇರ್ಪಡೆ

Update: 2018-09-26 09:24 GMT

ಮುಂಬೈ, ಸೆ.26: ಭಾರತದಲ್ಲಿ 1,000 ಕೋಟಿ ರೂ.ಗೂ ಅಧಿಕ ಮೌಲ್ಯದ ಸಂಪತ್ತು ಹೊಂದಿರುವ ಶ್ರೀಮಂತರ ಸಂಖ್ಯೆ ಈ ವರ್ಷ 831ಕ್ಕೆ ಏರಿದ್ದು, ಇದು ಕಳೆದ ವರ್ಷಕ್ಕಿಂತ 214ರಷ್ಟು ಹೆಚ್ಚಾಗಿದೆ ಎಂದು ಬಾರ್ಕ್‌ಲೇಸ್ ಹುರುನ್ ಇಂಡಿಯಾ ರಿಚ್ ಲಿಸ್ಟ್ ತಿಳಿಸಿದೆ.

3.7 ಲಕ್ಷ ಕೋಟಿ ರೂ. ಸಂಪತ್ತಿನೊಂದಿಗೆ ರಿಲಾಯನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ ಸತತ ಏಳನೇ ವರ್ಷವೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಟಾಪ್ ಟೆನ್ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಸೈರಸ್ ಪಲ್ಲೊಂಜಿ ಮಿಸ್ತ್ರಿ ಹಾಗೂ ಶಪೂರ್ಜಿ ಪಲ್ಲೊಂಜಿ ಮಿಸ್ತ್ರಿ ಅವರ ಹೆಸರಗಳೂ ಸೇರಿವೆ. ಟಿಸಿಎಸ್ ಶೇರುಗಳ ಬೆಲೆಯಲ್ಲಿ ಶೇ 56ರಷ್ಟು ಏರಿಕೆಯಿಂದ ಇದು ಸಾಧ್ಯವಾಗಿದೆ.

ಟಾಪ್ ಟೆನ್ ಪಟ್ಟಿಯಲ್ಲಿ ಅಂಬಾನಿ ನಂತರದ ಸ್ಥಾನ ಎಸ್.ಪಿ. ಹಿಂದುಜಾ ಕುಟುಂಬ, ಎನ್.ಎನ್.ಮಿತ್ತಲ್ ಮತ್ತು ಕುಟುಂಬ ಹಾಗೂ ಅಝೀಂ ಪ್ರೇಮ್‌ಜಿ ಇದ್ದರೆ, ಈ ಮೂರು ಮಂದಿಯ ಒಟ್ಟು ಸಂಪತ್ತಿಗಿಂತಲೂ ಅಂಬಾನಿ ಸಂಪತ್ತು ಹೆಚ್ಚಾಗಿರುವುದು ಉಲ್ಲೇಖನೀಯ. ಕಳೆದೊಂದು ವರ್ಷದಲ್ಲಿ ಮುಕೇಶ್ ಅಂಬಾನಿಯ ಸಂಪತ್ತು ಪ್ರತಿದಿನ ರೂ.300 ಕೋಟಿಯಷ್ಟು ಏರಿಕೆಯಾಗಿದೆ.

ಎಚ್‌ಸಿಎಲ್ ಕಂಪ್ಯೂಟರ್ಸ್‌ ನ ಶಿವ ನಾಡರ್ ಹಾಗೂ ಪತಂಜಲಿಯ ಆಚಾರ್ಯ ಬಾಲಕೃಷ್ಣ 2017ರ ಟಾಪ್ 10 ಪಟ್ಟಿಯಿಂದಲೇ ಹೊರ ಬಿದ್ದಿದ್ದರು.

ಹುರುನ್ ಇಂಡಿಯಾ ರಿಚ್ ಲಿಸ್ಟ್ ಬಿಡುಗಡೆ ಮಾಡಿದ ಹುರುನ್ ರಿಪೋರ್ಟ್ ಇಂಡಿಯಾ ಎಂ.ಡಿ. ಅನಸ್ ರಹ್ಮಾನ್ ಮಾತನಾಡುತ್ತಾ. ನೀರವ್ ಮೋದಿ ಹಗರಣದಿಂದಾಗಿ ಆಭರಣ ಕ್ಷೇತ್ರದಲ್ಲಿರುವವರ ಸಂಪತ್ತು ರೂ.19,000 ಕೋಟಿಯಷ್ಟು ಕಡಿಮೆಯಾಗಿದ್ದರೆ ಎಫ್‌ಎಂಸಿಜಿ ಕ್ಷೇತ್ರದ ಉದ್ಯಮಗಳ ಆದಾಯ ರೂ 11,500 ಕೋಟಿಯಷ್ಟು ಏರಿಕೆಯಾಗಿದೆ. ಗ್ರಾಮೀಣ ಕ್ಷೇತ್ರದ ಗ್ರಾಹಕರಿಂದ ಹೆಚ್ಚಿದ ಬೇಡಿಕೆಯಿಂದ ಇದು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತದ ರೂ.1,000 ಕೋಟಿಗೂ ಹೆಚ್ಚು ಸಂಪತ್ತು ಹೊಂದಿರುವ ಶ್ರೀಮಂತರ ಪಟ್ಟಿಯಲ್ಲಿರುವ ಎಲ್ಲರ ಒಟ್ಟು ಆದಾಯ ರೂ. 49 ಲಕ್ಷ ಕೋಟಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News