ಡಿ.16ರ ಸಾಮೂಹಿಕ ಅತ್ಯಾಚಾರಕ್ಕೆ ಸಾಕ್ಷಿಯಾಗಿದ್ದ ಈ ಬಸ್‌ನ ಗತಿ ಏನಾಗಿದೆ ನೋಡಿ.........

Update: 2018-09-26 11:16 GMT

ಡಿಎಲ್ 1ಪಿಸಿ 0149 ನೋಂದಣಿ ಸಂಖ್ಯೆಯನ್ನು ಹೊಂದಿರುವ ಈ ಬಸ್‌ನ ಓಡೊಮೀಟರ್ ಅದು 2,26,784 ಕೀ.ಮೀ.ಒಟ್ಟು ದೂರವನ್ನು ಕ್ರಮಿಸಿದೆ ಎನ್ನುವುದನ್ನು ತೋರಿಸುತ್ತಿದೆ. ಟೈರ್‌ಗಳು ಗಾಳಿಯಿಲ್ಲದೆ ಚಪ್ಪಟೆಯಾಗಿವೆ. ಡ್ಯಾಷ್‌ಬೋರ್ಡ್ ಮತ್ತು ಇಂಜಿನ್ ತುಕ್ಕು ಹಿಡಿದು ಹಾಳಾಗಿಹೋಗಿವೆ. ಡ್ಯಾಷ್‌ಬೋರ್ಡ್ ಬಳಿಯ ಸೀಟಿನಡಿ ತುಕ್ಕು ಹಿಡಿದ ಬೆಲ್ಟ್ ಬಕ್ಲ್ ಬಿದ್ದುಕೊಂಡಿದೆ. ದಿನೇಶ್ ಯಾದವ ಎಂಬಾತನ ಮಾಲಕತ್ವದ ಈ ಬಸ್ ವಸಂತ ವಿಹಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ 413/2012ರಲ್ಲಿ ವಶಪಡಿಸಿಕೊಂಡ ಆಸ್ತಿಯಾಗಿದ್ದು, 2012,ಡಿ.16ರಂದು ರಾತ್ರಿ ದಿಲ್ಲಿಯ ರಸ್ತೆಗಳಲ್ಲಿ ಚಲಿಸುತ್ತಿದ್ದ ಇದೇ ಬಸ್‌ನಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ‘ನಿರ್ಭಯಾ’ಳ ಮೇಲೆ ಸಾಮೂಹಿಕ ಅತ್ಯಾಚಾರ ಆಕೆಯ ಸ್ನೇಹಿತನ ಕಣ್ಣುಗಳೆದುರೇ ನಡೆದಿತ್ತು. ಅತ್ಯಾಚಾರದ ಬಳಿಕ ಆರೋಪಿಗಳು ನಿರ್ಭಯಾಳನ್ನು ಕ್ರೂರ ಹಿಂಸೆಗೊಳಪಡಿಸಿದ್ದು, ವಾರಗಳ ಬಳಿಕ ಸಿಂಗಾಪುರದ ಆಸ್ಪತ್ರೆಯೊಂದರಲ್ಲಿ ಆಕೆ ಕೊನೆಯುಸಿರೆಳೆದಿದ್ದಳು.

ಈ ಹೇಯ ಘಟನೆ ನಡೆದ ಬಳಿಕ ವಶಪಡಿಸಿಕೊಳ್ಳಲಾಗಿದ್ದ ಈ ಶ್ವೇತವರ್ಣದ ಐಷಾರಾಮಿ ಬಸ್ಸನ್ನು ಪೊಲೀಸ್ ಅಧಿಕಾರಿಗಳ ತಂಡವೊಂದು ದಿನದ 24 ಗಂಟೆಗಳ ಕಾಲವೂ ಕಾಯುತ್ತಿತ್ತು. ನಿರ್ಭಯಾಳ ಮೇಲಿನ ಸಾಮೂಹಿಕ ಅತ್ಯಾಚಾರವನು ವಿರೋಧಿಸಿ ಬೀದಿಗಿಳಿದಿದ್ದ ಸಹಸ್ರಾರು ಪ್ರತಿಭಟನಾಕಾರರು ಬಸ್ಸಿಗೆ ಬೆಂಕಿ ಹಚ್ಚಿ ನಾಶಗೊಳಿಸಲು ಬಯಸಿದ್ದರು. ಡಿ.16ರಂದು ರಾತ್ರಿ ಆರು ಜನ ದುಷ್ಕರ್ಮಿಗಳ ತಂಡವು ನಿರ್ಭಯಾಳ ಮೇಲೆಸಗಿದ್ದ ಕ್ರೌರ್ಯಕ್ಕೆ ಪ್ರತೀಕಾರ ತೆಗೆದುಕೊಳ್ಳಲು ಅವರು ಹತಾಶ ಪ್ರಯತ್ನಗಳನ್ನು ನಡೆಸಿದ್ದರು.

ಕೆಲವು ತಿಂಗಳುಗಳ ಹಿಂದಿನವರೆಗೂ ಈ ಬಸ್ಸನ್ನು ದಿಲ್ಲಿಯ ಸಾಕೇತ್ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ನಿಲ್ಲಿಸಲಾಗಿದ್ದು,ಪೊಲೀಸ್ ಕಾವಲನ್ನು ಏರ್ಪಡಿಸಲಾಗಿತ್ತು. ಯಾದವ ಗೆ ಈ ಬಸ್ ಕೊನೆಗೂ ವಾಪಸ್ ಸಿಕ್ಕಿಲ್ಲ. ಆತ ಬಸ್ಸನ್ನು ವಾಪಸ್ ಮಾಡುವಂತೆ ಎರಡು ಬಾರಿ ಅರ್ಜಿ ಸಲ್ಲಿಸಿದ್ದನಾದರೂ ಪೊಲೀಸರು ಅದನ್ನು ಬಿಡುಗಡೆಗೊಳಿಸಲಿಲ್ಲ. ಪ್ರಕರಣ ಇನ್ನೂ ಹಸಿರಾಗಿರುವುದರಿಂದ ಈ ಬಸ್ ಮತ್ತೆ ರಸ್ತೆಗಳಲ್ಲಿ ಸಂಚರಿಸಲು ಅವಕಾಶ ನೀಡಿದರೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎದುರಾಗುತ್ತದೆ ಎನ್ನುವುದು ಪೊಲೀಸರ ಆತಂಕವಾಗಿತ್ತು.

 ಆರು ಆರೋಪಿಗಳ ಪೈಕಿ ನಾಲ್ವರು ವಾಸವಿದ್ದ ದಿಲ್ಲಿಯ ಸಂತ ರವಿದಾಸ್ ಕ್ಯಾಂಪ್‌ನಿಂದ ಡಿ.17ರಂದು ಈ ಬಸ್ಸನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಡಿ.16ರಂದು ಜಾಯ್‌ರೈಡ್‌ಗೆಂದು ಹೊರಟು ಅತ್ಯಂತ ಅಮಾನುಷ ಕೃತ್ಯವನ್ನು ನಡೆಸಿದ್ದ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಲು ಸಾಕಷ್ಟು ಫಾರೆನ್ಸಿಕ್ ಸಾಕ್ಷಾಧಾರಗನ್ನು ಈ ಬಸ್ ಹೊಂದಿತ್ತು. ರೊಚ್ಚಿಗೆದ್ದಿದ್ದ ಪ್ರತಿಭಟನಾಕಾರರು ಬಸ್ಸಿಗೆ ಬೆಂಕಿ ಹಚ್ಚಿ ನಾಶಗೊಳಿಸಲು ಬಯಸಿದ್ದರಿಂದ ಪ್ರಮುಖ ಸಾಕ್ಷಿಯಾಗಿದ್ದ ಬಸ್ಸನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಬೇಕಿತ್ತು. ಹೀಗಾಗಿ ಈ ಬಸ್ಸನ್ನು ರಹಸ್ಯವಾಗಿ ಸಾಗಿಸಿ ದಕ್ಷಿಣ ದಿಲ್ಲಿಯ ತ್ಯಾಗರಾಜ ಕ್ರೀಡಾಂಗಣದ ಬಳಿಯ ರಸ್ತೆಯೊಂದರಲ್ಲಿ ಹಲವಾರು ಬಸ್‌ಗಳ ನಡುವೆ ನಿಲ್ಲಿಸಲಾಗಿತ್ತು. ಬಸ್‌ಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ಮಫ್ತಿಯಲ್ಲಿದ್ದ ಪೊಲೀಸರನ್ನು ಅಲ್ಲಿ ನಿಯೋಜಿಸಲಾಗಿತ್ತು. ಅಲ್ಲಿಯೇ ವಿಧಿವಿಜ್ಞಾನ ತಜ್ಞರು ಬಸ್ಸಿನಲ್ಲಿದ್ದ ಆರೋಪಿಗಳ ಬೆರಳಚ್ಚುಗಳನ್ನು ಮತ್ತು ಇತರ ನಿರ್ಣಾಯಕ ಸಾಕ್ಷಗಳನ್ನು ಸಂಗ್ರಹಿಸಿದ್ದರು.

ಇತ್ತೀಚಿನ ವರ್ಷಗಳಲ್ಲಿ ಸಾಕೇತ್ ನ್ಯಾಯಾಲಯ ಸಂಕೀರ್ಣದಲ್ಲಿದ್ದ ಬಸ್ಸನ್ನು ಬಳಿಕ ವಸಂತ ವಿಹಾರ ಪೊಲೀಸ್ ಠಾಣೆಯ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು. ಪೊಲೀಸ್ ಠಾಣೆಗಳನ್ನು ಎಲ್ಲ ಹಳೆಯ ವಾಹನಗಳಿಂದ ಮುಕ್ತಗೊಳಿಸಿ,ಆವರಣಗಳನ್ನು ಸ್ವಚ್ಛವಾಗಿರಿಸುವಂತೆ ಕಳೆದ ಎಪ್ರಿಲ್‌ನಲ್ಲಿ ಸರ್ವೋಚ್ಚ ನ್ಯಾಯಾಲಯವು ಆದೇಶಿಸುವವರೆಗೂ ಪೊಲೀಸ್ ತಂಡವೊಂದು ಈ ಬಸ್ಸನ್ನು ಕಾಯುತ್ತಲೇ ಇತ್ತು.

ಆರು ವರ್ಷಗಳ ಬಳಿಕ ಈ ಬಸ್ ಮತ್ತೆ ಡಿ.15ರ ರಾತ್ರಿಯ ಅದೇ ಮಾರ್ಗದಲ್ಲಿ ಸಾಗಿದೆ. ಆದರೆ ಈ ಬಾರಿ ಕ್ರೇನ್ ಮೂಲಕ ರಹಸ್ಯವಾಗಿ ಸಾಗಿಸಿ ಪಶ್ಚಿಮ ದಿಲ್ಲಿಯಲ್ಲಿನ ಡಂಪ್ ಯಾರ್ಡ್‌ನಲ್ಲಿ ನಿಲ್ಲಿಸಲಾಗಿದೆ.

ಬಸ್ಸಿನಲ್ಲಿಯ ಹಿಂದಿನಿಂದ ಎರಡನೇ ಆಸನದ ಮಟ್ಟವನ್ನು ತಗ್ಗಿಸಲಾಗಿದ್ದು,ಕೊನೆಯ ಆಸನದೊಂದಿಗೆ ಸೇರಿಕೊಂಡು ಅದು ಹಾಸಿಗೆಯ ರೂಪ ತಳೆದಿತ್ತು ಮತ್ತು ಈಗಲೂ ಹಾಗೆಯೇ ಇದೆ. ಇಲ್ಲಿಯೇ ನಿರ್ಭಯಾಳ ಮೇಲೆ ಘೋರ ಸಾಮೂಹಿಕ ಅತ್ಯಾಚಾರ ನಡೆದಿತ್ತು.

ಕಿಟಕಿಗಳ ಪರದೆಗಳು ಚಿಂದಿಯೆದ್ದಿವೆ, ಆಸನಗಳ ಹೊದಿಕೆಗಳು ಹಾಳಾಗಿಹೋಗಿವೆ. ಕಿಟಕಿಗಳ ಗಾಜುಗಳೇ ಇಲ್ಲ,ಅವುಗಳನ್ನು ಪ್ರಕರಣದ ವಿಚಾರಣೆಯ ಆರಂಭದಲ್ಲಿ ಬಸ್ ಸಾಕೇತ್ ನ್ಯಾಯಾಲಯದ ಆವರಣದಲ್ಲಿದ್ದಾಗ ಪ್ರತಿಭಟನಾಕಾರರು ಹುಡಿಗೊಳಿಸಿದ್ದರು.

ಈ ಬಸ್ಸನ್ನು ಈಗ ಯಾರೂ ಖರೀದಿಸುವುದಿಲ್ಲ. ಒಂದು ದಿನ ಅದು ಗುಜರಿಯವರ ಪಾಲಾಗಲಿದೆ. ಆರಂಭದಲ್ಲಿ ಬಸ್ಸನ್ನು ಮರಳಿ ಪಡೆಯಲು ಯಾದವ ಪ್ರಯತ್ನಿಸಿದ್ದ. ಆದರೆ ಮರಳಿ ಪಡೆಯುವುದರಲ್ಲಿ ಯಾವುದೇ ಅರ್ಥವಿಲ್ಲ ಎನ್ನುವುದು ಆತನಿಗೂ ಮನದಟ್ಟಾಗಿದೆ. ಗುಜರಿಯವರು ಈ ಬಸ್ಸಿಗೆ 5,000 ರೂ.ಕೊಟ್ಟರೆ ಅದೇ ದೊಡ್ಡದು ಎನ್ನುವುದು ಪೊಲೀಸ್ ಅಧಿಕಾರಿಗಳ ಅಭಿಪ್ರಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News