ಕ್ರೌರ್ಯದ ವೈಭವೀಕರಣ ಬೇಡ: ಮಾಧ್ಯಮ ಸಂವಾದದಲ್ಲಿ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ ಸಲಹೆ

Update: 2018-09-26 13:06 GMT

ಮಂಗಳೂರು, ಸೆ. 26: ಸಮಾಜದಲ್ಲಿ ನಡೆಯುತ್ತಿರುವ ಕ್ರೌರ್ಯಗಳನ್ನು ವೈಭವೀಕರಿಸುವ ಬದಲು ಸಮಾಜದ ಒಳಿತಿಗೆ ದುಡಿಯುವವರ ಬಗ್ಗೆ ಪ್ರಚಾರ ಒದಗಿಸುವ ಕೆಲಸ ಮಾಧ್ಯಮಗಳಿಂದ ಆಗಬೇಕು. ಸುಳ್ಳು ಸುದ್ದಿಗಳಿಂದ ಕುಟುಂಬ ವ್ಯವಸ್ಥೆಯ ಜತೆಯಲ್ಲಿ ಸಮಾಜದ ಆರೋಗ್ಯ ಕೆಡುತ್ತದೆ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ಮಾಧ್ಯಮಗಳಿಗೆ ಸಲಹೆ ನೀಡಿದ್ದಾರೆ.

ಬುಧವಾರ ನಗರದ ಸಂದೇಶ ಪ್ರತಿಷ್ಠಾನದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಧ್ಯಮ ಹಾಗೂ ಪತ್ರಕರ್ತರು ಸಮಾಜದ ಕಣ್ಣಿದ್ದಂತೆ. ದಿನನಿತ್ಯದ ಸಮಾಜದಲ್ಲಿರುವ ಉತ್ತಮ ವಿಚಾರಗಳನ್ನು ಜಾಸ್ತಿ ಪ್ರಚಾರ ನೀಡಿದರೆ ಸಮಾಜ ಕೂಡ ಉತ್ತಮ ಹಾದಿಯಲ್ಲಿ ಸಾಗಲು ನೆವಾಗುತ್ತದೆ ಎಂದವರು ಹೇಳಿದಿರು.

ಪ್ರತಿಯೊಂದು ಧರ್ಮವೂ ದಯೆಯನ್ನು ಪ್ರತಿನಿಧಿಸುತ್ತದೆ. ಇದೇ ಕಾರಣದಿಂದ ಬಸವಣ್ಣ ದಯೆಯೇ ಧರ್ಮದ ಮೂಲವಯ್ಯ ಕೂಡಲಸಂಗಲಮ ದೇವ ಎಂದು ತಮ್ಮ ವಚನದಲ್ಲಿ ಹೇಳಿಕೊಂಡಿದ್ದಾರೆ. ದಯೆಯನ್ನು ಧರ್ಮದ ತಿರುಳು ಎಂದೇ ಕರೆಯಲಾಗುತ್ತದೆ. ಈ ನೆಲೆಯಲ್ಲಿ ಸಮಾಜದಲ್ಲಿ ಸಾಮರಸ್ಯ ನೆಲೆಗೊಳ್ಳಲು ಬಂಧುತ್ವ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದ ಒಳಿತಿಗೆ ನಿರ್ಧಾರ ತೆಗೆದುಕೊಳ್ಳುವ ಆಡಳಿತಾಧಿಕಾರಿಗಳು, ರಾಜಕೀಯ ಮುಖಂಡರು ಸೇರಿದಂತೆ ಶಿಕ್ಷಣ ವ್ಯವಸ್ಥೆಯಲ್ಲಿ ತೊಡಗಿರುವ ಮಂದಿಯನ್ನು ಒಟ್ಟಾಗಿ ಸೇರಿಸುವ ಕೆಲಸ ಮಾಡಿದ್ದೇವೆ. ಇದು ಬರೀ ಒಂದು ಸಮುದಾಯದ ಶ್ರಮವಾಗಬಾರದು. ಇಡೀ ಸಮಾಜದ ಉತ್ತಮ ಮನಸ್ಸುಗಳು ಜತೆಗೂಡಿಕೊಂಡು ಮಾಡುವ ಕಾರ್ಯವಾಗಿದೆ ಎಂದರು.

ಮಾಧ್ಯಮ ಮತ್ತು ಪತ್ರಕರ್ತರು ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೇ ಸಮಾಜದ ತೀರಾ ಹಿಂದುಳಿದ ಪ್ರದೇಶಗಳಲ್ಲಿರುವ ಸಮಸ್ಯೆಗಳನ್ನು ಹುಡುಕಿಕೊಂಡು ಅದಕ್ಕೆ ಪರಿಹಾರ ನೀಡುವ ಕೆಲಸಕ್ಕೆ ಸಹಕಾರ ನೀಡುವಂತಾಗಬೇಕು.ಸುಳ್ಳು ಸುದ್ದಿಗಳನ್ನು ಅದಷ್ಟೂ ದೂರ ಮಾಡುತ್ತಾ ಸತ್ಯದಿಂದ ಕೂಡಿದ ವರದಿಗಳ ಮೂಲಕ ‘ಕ್ಲೀನ್ ಜರ್ನಲಿಸಂ’ ನೆಲೆ ಭದ್ರಗೊಳ್ಳಲಿ ಎಂದವರು ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭ ಪತ್ರಕರ್ತರ ಜತೆ ಸಂವಾದ ನಡೆಸಿ ಬಂಧುತ್ವ ಎನ್ನುವ ಕಾರ್ಯಕ್ರಮ ಇನ್ನು ದೊಡ್ಡ ಮಟ್ಟದಲ್ಲಿ ಮಾಡುವ ಯೋಜನೆ ಇಟ್ಟುಕೊಳ್ಳಲಾಗಿದೆ. ಈಗ 100 ಮಂದಿಯನ್ನು ಮಾತ್ರ ಆಮಂತ್ರಣ ಮಾಡಿ ಅವರ ಜತೆಯಲ್ಲಿ ಸಮಾಲೋಚನೆ ನಡೆಸುವ ಕೆಲಸವಾಗಿದೆ. ಮುಂದೆ ನಾನಾ ಧರ್ಮಗಳ ಮುಖಂಡರ ಜತೆಗೆ ಸೇರಿಕೊಂಡು ದೊಡ್ಡ ಮಟ್ಟಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಕೆಲಸ ಸಾಗಲಿದೆ. ಇದೊಂದು ಅಭಿಯಾನದ ರೂಪ ತೆಗೆದುಕೊಂಡು ಹೋಗುವಂತಹ ಸ್ಥಿತಿಯನ್ನು ನಿರ್ಮಾಣ ಮಾಡಬೇಕು ಎನ್ನುವ ಉದ್ದೇಶ ಇಟ್ಟುಕೊಳ್ಳಲಾಗಿದೆ.

ಮಂಗಳೂರು ಧರ್ಮಪ್ರಾಂತ್ಯ ಉದ್ಯೋಗ ಸೃಷ್ಟಿಯಲ್ಲಿ ಸಾಕಷ್ಟು ಕೆಲಸ ಮಾಡಿದೆ. ಧರ್ಮಪ್ರಾಂತ್ಯದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಆಶ್ರಮಗಳು ಹೀಗೆ ಪ್ರತಿಯೊಂದು ವಿಚಾರದಲ್ಲೂ ಉದ್ಯೋಗವನ್ನು ನೀಡುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ಅದಷ್ಟೂ ಬಗೆಹರಿಸುವ ಕಾರ್ಯ ಮಾಲಾಗುತ್ತಿದೆ ಎಂದವರು ಹೇಳಿದರು.

ಬಂಧುತ್ವದ ಮೂಲಕ ಸಮಾಜದಲ್ಲಿ ಸಾಮರಸ್ಯ ಒಂದೇ ಸಲ ತರಲು ಸಾಧ್ಯವಿಲ್ಲ. ಆದರೆ ಬಂಧುತ್ವದ ಬೀಜ ಇಂದು ಹಾಕಿದರೆ ಅದು ಹತ್ತು ವರ್ಷಗಳ ನಂತರ ಗಿಡವಾಗಿ, ಮರವಾಗಬಹುದು. ಈ ಯೋಜನೆ ಹೆಚ್ಚು ಸಮಯ ತಗಲುತ್ತದೆ. ಆದರೆ ಬದಲಾವಣೆ ಕೂಡ ನಡೆದು ಉತ್ತಮ ಲಿತಾಂಶವನ್ನು ತಂದು ಕೊಡಬಹುದು ಎನ್ನುವ ನಂಬಿಕೆ ನಮಗೆ ಇದೆ.

ನಾನು ಐರೋಪ್ಯ ರಾಷ್ಟ್ರಗಳಲ್ಲಿ ಜಾಸ್ತಿ ಸಮಯ ಕಳೆದ ಪರಿಣಾಮ ಅಲ್ಲಿ ಗಮನಿಸಿದಂತೆ ದೇವರ ಮೇಲೆ ಅವರಿಗೆ ನಂಬಿಕೆ ಕಡಿಮೆಯಾಗುತ್ತಿದೆ. ಅವರು ಆರ್ಥಿಕವಾಗಿ ಸಬಲರಾಗುತ್ತಿರುವುದರಿಂದ ದೇವರ ಅವಶ್ಯಕತೆ ಅವರಿಗೆ ಇಲ್ಲ. ಆದರೆ ಭಾರತದಂತಹ ದೇಶದಲ್ಲಿ ಮಾತ್ರ ಭಿನ್ನವಾದ ದೃಶ್ಯವಿದೆ. ಇಲ್ಲಿ ಬಡವರು ಹೆಚ್ಚಾಗಿ ಇರುವುದರಿಂದ ಅವರಿಗೆ ದೇವರ ಮೇಲೆ ವಿಶೇಷವಾದ ನಂಬಿಕೆ. ನಮ್ಮನ್ನು ಕಾಪಾಡಲು ದೇವರು ಬರುತ್ತಾರೆ ಎನ್ನುವ ನಂಬಿಕೆ ಆಚಾರದಲ್ಲಿ ಅವರು ಕಾಲ ಕಳೆಯುತ್ತಾರೆ. ಇದೇ ಕಾರಣದಿಂದ ಸಾಕಷ್ಟು ಧಾರ್ಮಿಕ ಚಟುವಟಿಕೆಗಳು ಇಲ್ಲಿ ನಡೆಯುತ್ತದೆ. ಯುವಜನತೆ ಕೂಡ ಧಾರ್ಮಿಕ ವಿಚಾರದಲ್ಲಿ ಸಾಕಷ್ಟು ತೊಡಗಿಸಿಕೊಂಡಿದ್ದಾರೆ ಎನ್ನುವುದಕ್ಕೆ ಬೇಕಾದಷ್ಟು ಉದಾಹರಣೆಗಳು ಸಮಾಜದಲ್ಲಿ ಕಾಣಿಸಿಕೊಳ್ಳುತ್ತದೆ ಎಂದರು.
ಸಂದೇಶ ಪ್ರತಿಷ್ಟಾನದ ನಿರ್ದೇಶಕ ನೆಲ್ಸನ್ ಡಿ ಅಲ್ಮೇಡಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News