ಸತ್ಯ ಅಥವಾ ‘ಫೇಕ್’ ಇರಲಿ, ಮೆಸೇಜ್ ಗಳನ್ನು ವೈರಲ್ ಮಾಡಿ: ಬಿಜೆಪಿ ಕಾರ್ಯಕರ್ತರಿಗೆ ಅಮಿತ್ ಶಾ ಕರೆ

Update: 2018-09-26 13:34 GMT

ಹೊಸದಿಲ್ಲಿ, ಸೆ.26: “ರಾಹುಲ್ ಗಾಂಧಿಯ ಎಲ್ಲಾ ಅನುಯಾಯಿಗಳು ವಿದೇಶಿಗರು. ಬಾಡಿಗೆ ಗೂಂಡಾಗಳ ಬಗ್ಗೆ ಭಯಪಡಬೇಡಿ. ಸುದ್ದಿಯೊಂದು ಸತ್ಯವಿರಲಿ, ಸುಳ್ಳಿರಲಿ, ಒಳ್ಳೆಯದಿರಲಿ, ಕೆಟ್ಟದಿರಲಿ ನೀವದನ್ನು ವೈರಲ್ ಮಾಡಬೇಕು” ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ ಎಂದು thewire.in ವರದಿ ಮಾಡಿದೆ.

ರಾಜಸ್ಥಾನದ ಕೋಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಲತಾಣದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, “ರಾಷ್ಟ್ರ ಹಾಗು ರಾಜ್ಯ ಮಟ್ಟದಲ್ಲಿ ನಾವು ಸಾಮಾಜಿಕ ಜಾಲತಾಣದ ಮೂಲಕವೇ ಸರಕಾರ ರಚಿಸಬೇಕು. ಸಂದೇಶಗಳು ವೈರಲ್ ಆಗುವಂತೆ ನೋಡಿಕೊಳ್ಳಿ. ಉತ್ತರ ಪ್ರದೇಶದಲ್ಲಿ ನಾವು 32 ಲಕ್ಷ ಜನರಿರುವ ವಾಟ್ಸ್ ಆ್ಯಪ್ ಗ್ರೂಪ್ ಗಳನ್ನು ಮಾಡಿದ್ದೇವೆ. ಬೆಳಗ್ಗೆ ಅವರು 8 ಗಂಟೆಗೆ ಮೆಸೇಜ್ ಕಳುಹಿಸುತ್ತಾರೆ” ಎಂದು ಪಕ್ಷದ ಕಾರ್ಯವೈಖರಿಯ ಬಗ್ಗೆ ವಿವರಿಸಿದರು.

ಮುಂದುವರಿದು ಮಾತನಾಡಿದ ಬಿಜೆಪಿ ಅಧ್ಯಕ್ಷ, “ಅಖಿಲೇಶ್ ಯಾದವ್ ಮುಲಾಯಂ ಸಿಂಗ್ ಯಾದವ್ ಗೆ ಕಪಾಳಮೋಕ್ಷ ಮಾಡಿದ್ದಾಗಿ ನಮ್ಮ ಕಾರ್ಯಕರ್ತನೊಬ್ಬ ಸುಳ್ಳು ಸುದ್ದಿ ತಯಾರಿಸಿದ. ಈ ಸುದ್ದಿ ದೇಶಾದ್ಯಂತ ವೈರಲ್ ಆಯಿತು. ನನಗೂ ಈ ಬಗ್ಗೆ ಮಾಹಿತಿ ಲಭಿಸಿತ್ತು. ಪ್ರತಿಯೊಬ್ಬರೂ ಅದರ ಬಗ್ಗೆಯೇ ಮಾತನಾಡುತ್ತಿದ್ದರು. ಆದರೆ ಅದು ಸುಳ್ಳು ಮಾಹಿತಿಯಾಗಿತ್ತು. ನೀವು ಕೂಡ ಹೀಗೆಯೇ ಮಾಡಬಹುದು. ಆದರೆ ನೀವು ಮಾಡಲೇಬೇಕು ಎಂದು ನಾನು ಹೇಳುವುದಿಲ್ಲ. ನಿಮಗೆ ನಾನು ಏನು ಹೇಳಲು ಬಯಸುತ್ತಿದ್ದೇನೆಂದು ನಿಮಗೆ ಅರ್ಥವಾಗಿದೆ ಎಂದು ಭಾವಿಸುತ್ತೇನೆ. ನಾವು ಸಂದೇಶಗಳನ್ನು ವೈರಲ್ ಮಾಡುತ್ತಲೇ ಇರಬೇಕು. ಅದು ಸತ್ಯವಿರಲಿ, ಸುಳ್ಳಿರಲಿ, ಒಳ್ಳೆಯದಿರಲಿ ಅಥವಾ ಕೆಟ್ಟದ್ದಿರಲಿ” ಎಂದು ಹೇಳಿದ್ದಾರೆ ಎಂದು thewire.in ವರದಿ ಮಾಡಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News