ಮಹಿಳೆಗೆ ಜೀಪಿನ ಮೇಲೆ ಕುಳಿತುಕೊಳ್ಳುವ ಶಿಕ್ಷೆ ನೀಡಿದ ಪೊಲೀಸರು!
Update: 2018-09-26 19:28 IST
ಅಮೃತಸರ,ಸೆ.26: ಚಲಿಸುತ್ತಿದ್ದ ಪೊಲೀಸ್ ಜೀಪಿನ ಮೇಲೆ ಕುಳಿತುಕೊಳ್ಳುವ ‘ಶಿಕ್ಷೆ’ಗೊಳಗಾಗಿದ್ದ ಮಹಿಳೆಯೋರ್ವಳು ಕೆಳಕ್ಕೆ ಬಿದ್ದು ಆಸ್ಪತ್ರೆಗೆ ಸೇರಿದ ಘಟನೆ ಇಲ್ಲಿ ನಡೆದಿದೆ.
ಜೀಪಿನ ಮೇಲೆ ಕುಳಿತಿದ್ದ ಮಹಿಳೆ ಕಡಿದಾದ ತಿರುವಿನಲ್ಲಿ ಸಮತೋಲನ ಕಳೆದುಕೊಂಡು ಕೆಳಕ್ಕೆ ಬಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಆಸ್ತಿ ವಿವಾದದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹಿಳೆಯ ಮಾವನನ್ನು ಪ್ರಶ್ನಿಸಲು ಪೊಲೀಸರು ಚಾವಿಂಡಾ ದೇವಿ ಪ್ರದೇಶದಲ್ಲಿರುವ ಆಕೆಯ ಮನಗೆ ತೆರಳಿದ್ದರು. ಆತ ಸಿಗದಿದ್ದಾಗ ಅವರು ಮಹಿಳೆಯ ಪತಿಯನ್ನು ಕರೆದೊಯ್ಯಲು ಮುಂದಾಗಿದ್ದರು. ಇದನ್ನು ಮಹಿಳೆ ಆಕ್ಷೇಪಿಸಿದಾಗ ಶಿಕ್ಷೆಯ ರೂಪದಲ್ಲಿ ಆಕೆಯನ್ನು ಜೀಪಿನ ಛಾವಣಿಗೆ ಹತ್ತಿಸಿದ್ದರು.