ಆಧಾರ್ ಅಸಾಂವಿಧಾನಿಕ: ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಚಂದ್ರಚೂಡ

Update: 2018-09-26 15:26 GMT

ಹೊಸದಿಲ್ಲಿ, ಸೆ. 26: ಆಧಾರ್ ಕಾರ್ಡ್‌ಗೆ ಸಂವಿಧಾನದ ಮಾನ್ಯತೆ ನೀಡುವ ವಿಚಾರದಲ್ಲಿ ಐವರು ನ್ಯಾಯಮೂರ್ತಿಗಳ ಪೈಕಿ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಮಾತ್ರ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂವಿಧಾನವನ್ನು ವಂಚಿಸುವುದರಿಂದ ಆಧಾರ್ ಕಾಯ್ದೆಯನ್ನು ಹಣಕಾಸು ಮಸೂದೆಯಂತೆ ಅಂಗೀಕರಿಸಲು ಸಾಧ್ಯವಿಲ್ಲ ಹಾಗೂ ಇದನ್ನು ರದ್ದುಗೊಳಿಸುವುದು ಸೂಕ್ತವಾಗಿದೆ ಎಂದು ನ್ಯಾಯಮೂರ್ತಿ ಚಂದ್ರಚೂಡ ಅವರು ಹೇಳಿದ್ದಾರೆ.

ರಾಜ್ಯಸಭೆಯನ್ನು ದಾರಿ ತಪ್ಪಿಸಿ ಆಧಾರ್ ಕಾಯ್ದೆ ಅಂಗೀಕರಿಸುವುದು ಹೇರಿದ ಹಾಗೆ. ಸಂವಿಧಾನದ 110ನೇ ವಿಧಿಯನ್ನು ಉಲ್ಲಂಘಿಸುವುದರಿಂದ ಈ ಕಾಯ್ದೆ ರದ್ದುಗೊಳಿಸಲು ಸೂಕ್ತವಾದುದು.

ಹಣಕಾಸು ಮಸೂದೆಗೆ ವಿಧಿ 110 ಸೂಕ್ತ ಆಧಾರ. ಆದರೆ, ಆಧಾರ್ ಕಾನೂನು ಇದರ ವ್ಯಾಪ್ತಿಗಿಂತ ಹೊರಗಿದೆ. ಪ್ರಸಕ್ತ ರೀತಿಯಲ್ಲಿ ಆಧಾರ್ ಕಾಯ್ದೆಯನ್ನು ಸಾಂವಿಧಾನಿಕವಾಗಿ ಎತ್ತಿ ಹಿಡಿಯಲು ಸಾಧ್ಯವಿಲ್ಲ. ಮೊಬೈಲ್ ಫೋನ್‌ಗಳು ಬುದುಕಿನ ಅವಿಭಾಜ್ಯ ಅಂಗ. ಮೊಬೈಲ್ ಫೋನ್‌ಗೆ ಆಧಾರ್ ಸಂಖ್ಯೆ ಜೋಡಿಸುವುದರಿಂದ ಸ್ವಾತಂತ್ರ್ಯ, ಸ್ವಾಯತ್ತೆ, ಖಾಸಗಿತನಕ್ಕೆ ಅತಿ ದೊಡ್ಡ ಬೆದರಿಕೆ ಎಂದು ಅವರು ಹೇಳಿದ್ದಾರೆ.

 ತಾಂತ್ರಿಕ ಅಭಿವೃದ್ಧಿಗಾಗಿ ಸಾಂವಿಧಾನಿಕ ಹಕ್ಕುಗಳನ್ನು ಬಲಿ ಕೊಡಲು ಸಾಧ್ಯವಾಗುವುದಿಲ್ಲ. ಆಧಾರ್ ಕಾರ್ಡ್‌ಗೆ ಸಾಂವಿಧಾನಿಕ ಮಾನ್ಯತೆ ಸೂಕ್ತವಲ್ಲ. ಆದಾಯ ತೆರಿಗೆ ರಿಟರ್ನ್ಸ್ ಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲು ಸಾಧ್ಯವಿಲ್ಲ. ಆಧಾರ್ ದತ್ತಾಂಶ ಸೋರಿಕೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅವರು, ಪ್ರಸ್ತುತ ಆಧಾರ್ ಸುರಕ್ಷತೆಗೆ ಸಂಬಂಧಿಸಿದ ಸ್ವತಂತ್ರ ನಿಯಂತ್ರಕ ಚೌಕಟ್ಟಿನ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಮೊಬೈಲ್ ಸೇವಾದಾರರು ತಾವು ಸಂಗ್ರಹಿಸಿದ ದತ್ತಾಂಶಗಳನ್ನು ಕಾಲ ಕಾಲಕ್ಕೆ ಅಳಿಸಿ ಹಾಕಬೇಕು ಎಂದರು.

ಆಧಾರ್ ಯೋಜನೆ ಮಾಹಿತಿ ಗೌಪ್ಯತೆ, ಆತ್ಮ ಸಂಕಲ್ಪ ಹಾಗೂ ದತ್ತಾಂಶ ರಕ್ಷಣೆಯನ್ನು ಉಲ್ಲಂಘಿಸುತ್ತದೆ. ಯುಐಡಿಎಐ ದೊಡ್ಡ ಪ್ರಮಾಣದಲ್ಲಿ ದತ್ತಾಂಶಗಳನ್ನು ಸಂಗ್ರಹಿಸುತ್ತದೆ. ಇದನ್ನು ವ್ಯಕ್ತಿಗಳ ಅನುಮತಿ ಇಲ್ಲದೆ ಮೂರನೇ ವ್ಯಕ್ತಿ ಅಥವಾ ಖಾಸಗಿ ಸೇವಾದಾರರು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದು ನ್ಯಾಯಮೂರ್ತಿ ಚಂದ್ರಚೂಡ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News