ಭಾರತದ ಅನೇಕ ವೈದ್ಯರು ಕ್ಷಯರೋಗದ ಲಕ್ಷಣ ಪತ್ತೆ ಮಾಡುವಲ್ಲಿ ವಿಫಲ: ಅಧ್ಯಯನ
ವಾಶಿಂಗ್ಟನ್,ಸೆ.26: ಭಾರತದಲ್ಲಿ ಖಾಸಗಿ ಕ್ಷೇತ್ರದ ಅನೇಕ ವೈದ್ಯರು ಕ್ಷಯರೋಗದ ಲಕ್ಷಣಗಳನ್ನು ಪತ್ತೆಹಚ್ಚುವಲ್ಲಿ ವಿಫಲವಾಗುತ್ತಾರೆ ಮತ್ತು ರೋಗಿಗೆ ಅಸಮರ್ಪಕ ಚಿಕಿತ್ಸೆಯನ್ನು ನೀಡುತ್ತಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಭಾರತ, ಚೀನಾ, ಇಂಡೋನೇಶಿಯಾ ಹಾಗೂ ಇತರ ಹಲವು ದೇಶಗಳಲ್ಲಿ ಗಾಳಿಯಿಂದ ಹರಡುವ ಕ್ಷಯರೋಗ ಅಥವಾ ಟಿಬಿ ಸಾರ್ವಜನಿಕ ಆರೋಗ್ಯ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. 2017ರಲ್ಲಿ ಈ ಕಾಯಿಲೆಗೆ ತುತ್ತಾಗಿ 1.7 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ. ಈ ಕಾಯಿಲೆಯ ವಿರುದ್ಧದ ಹೋರಾಟದಲ್ಲಿ ರೋಗಿಯು ಕೆಮ್ಮಲು ಆರಂಭಿಸಿದ ಸಂದರ್ಭದಲ್ಲಿ ಅವರನ್ನು ಪರೀಕ್ಷಿಸುವ ಪ್ರಾಥಮಿಕ ಆರೋಗ್ಯ ವೈದ್ಯರು ದುರ್ಬಲ ಕೊಂಡಿಯಾಗಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನವನ್ನು ನಡೆಸಿದ ಮುಂಬೈ ಮತ್ತು ಪೂರ್ವ ಪಾಟ್ನದಲ್ಲಿ ಇದು ರುಜುವಾತಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನದ ಆರ್ಥಿಕ ನೆರವಿನೊಂದಿಗೆ ಮ್ಯಾಕ್‌ಗಿಲ್ ವಿಶ್ವವಿದ್ಯಾನಿಲಯ, ವಿಶ್ವಬ್ಯಾಂಕ್ ಮತ್ತು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಸಂಶೋಧಕರ ನೇತೃತ್ವದಲ್ಲಿ ನಡೆದ ಈ ಅಧ್ಯಯನದಲ್ಲಿ ಕೆಲವು ಜನರನ್ನು ರೋಗವಿರುವಂತೆ ನಟಿಸುವಂತೆ ತಿಳಿಸಲಾಗಿತ್ತು. 2015-15 ರ ಮಧ್ಯೆ ಹತ್ತು ತಿಂಗಳ ಕಾಲ ಈ ಅಧ್ಯಯನ ನಡೆಸಲಾಗಿತ್ತು. 24 ಮಾದರಿ ರೋಗಿಗಳು ಸಾಮಾನ್ಯ ಕೆಮ್ಮು ಮತ್ತು ರೋಗವಿರುವ ಸಾಧ್ಯತೆ ಹೊಂದಿರುವ ಕಫ ಹೀಗೆ ಹಲವು ಲಕ್ಷಣಗಳ ಜೊತೆಗೆ 1,288 ಖಾಸಗಿ ಕ್ಷೇತ್ರದ ವೈದ್ಯರ ಬಳಿ ತೆರಳಿದರು. ಈ ಸಂದರ್ಭದಲ್ಲಿ ಈ ರೋಗಿಗಳನ್ನು ಪರೀಕ್ಷಿಸಿದ, ಅರ್ಹ ವೈದ್ಯರು, ಅನರ್ಹರು ಮತ್ತು ಸಾಂಪ್ರದಾಯಿಕ ಔಷಧ ಚಿಕಿತ್ಸೆಯನ್ನು ಅನುಸರಿಸುವ ಶೇ.65 ವೈದ್ಯರು ಭಾರತೀಯ ಮತ್ತು ಅಂತರ್‌ರಾಷ್ಟ್ರೀಯ ಸೇವಾ ಗುಣಮಟ್ಟಕ್ಕೆ ಸರಿಹೊಂದದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಕೆಲವೊಂದು ಪ್ರಕರಣಗಳಲ್ಲಿ ಸಮಸ್ಯೆಯು ವಾಯುಮಾಲಿನ್ಯದ ಜೊತೆ ಸಂಬಂಧ ಹೊಂದಿದೆ ಎಂದು ಸಂಶಯಿಸಿದ ವೈದ್ಯರು ರೋಗಿಗೆ ರೋಗನಿರೋಧಕ ಔಷಧಿ ಮತ್ತು ಸಿರಪ್ ನೀಟಿ ಕೆಲವು ವಾರಗಳ ನಂತರ ವಾಪಸ್ ಭೇಟಿ ಮಾಡುವಂತೆ ಸೂಚಿಸಿದ್ದರು.
ವೈದ್ಯಕೀಯ ತರಬೇತಿ ಪಡೆದ ವೈದ್ಯರು, ಮುಖ್ಯವಾಗಿ ಮುಂಬೈಯಲ್ಲಿ ಅರ್ಧದಷ್ಟು ಮಾದರಿ ರೋಗಿಗಳಿಗೆ ಸರಿಯಾದ ಚಿಕಿತ್ಸೆಯನ್ನು ಒದಗಿಸುವ ಮೂಲಕ ಇತರರಿಗಿಂತ ಉತ್ತಮ ನಿರ್ವಹಣೆ ನೀಡಿದ್ದಾರೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ವೈದ್ಯ ತರಬೇತಿ ಪಡೆಯದ ವೈದ್ಯರು ಮತ್ತು ಆಯುಷ್ ಎಂದು ಕರೆಯಲ್ಪಡುವ ಆಯುರ್ವೇದ, ಯುನಾನಿ, ಸಿದ್ಧೌಷಧಿ ಇತ್ಯಾದಿಗಳನ್ನು ನೀಡುವ ಸಾಂಪ್ರದಾಯಿಕ ವೈದ್ಯರು ಅತ್ಯಂತ ಕೆಟ್ಟ ನಿರ್ವಹಣೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.