ಸುಳ್ಯ: ನೇಣುಬಿಗಿದು ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

Update: 2018-09-27 09:07 GMT

ಸುಳ್ಯ, ಸೆ. 27: ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಡೆಂಟಲ್ ವೈದ್ಯಕೀಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ.

ಮೃತ ಯುವತಿಯನ್ನು ಕೇರಳ ಕೊಟ್ಟಯಂ ನ ತಿರುವನಚೂರು ಅನುಜನ್ ಥಾಮಸ್ ಎಂಬವರ ಪುತ್ರಿ ನೇಹಾ ಥಾಮಸ್ ಎಂದು ಗುರುತಿಸಲಾಗಿದೆ.

ಈಕೆ ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಮೊದಲ ವರ್ಷದ ಎಂ.ಡಿ.ಎಸ್ ಓದುತ್ತಿದ್ದು, ಕುರುಂಜಿಭಾಗ್‌ನ ಕಾವೇರಿ ಆರ್ಕೇಡ್‌ನಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು.

ಸೆ.26ರಂದು ಸಂಜೆ ನೇಹಾ ತಮ್ಮ ಕೊಠಡಿಗೆ ಹೋಗಿದ್ದು, ನಂತರ ನೇಹಾಗೆ ಯಾವುದೋ ಫೋನ್ ಕರೆ ಬಂದಿದ್ದು ಅದರಲ್ಲಿ ಆಕೆ ಏರುದ್ವನಿಯಲ್ಲಿ ಮಾತನಾಡುತ್ತಿದ್ದುದನ್ನು ಆಕೆಯ ಗೆಳತಿ ಗಮನಿಸಿದ್ದಾಳೆ. ಇದಾದ ಬಳಿಕ ಆಕೆಯ ಗೆಳತಿ ತನ್ನ ಕೊಠಡಿಯಲ್ಲಿ ನಿದ್ದೆಗೆ ಜಾರಿದ್ದು ಸುಮಾರು 6 ಗಂಟೆಯ ವೇಳೆಗೆ ಎಚ್ಚರವಾಗಿ ನೇಹಾಳ ಕೊಠಡಿ ಬಳಿ ಬಂದು ಕರೆದಾಗ ಆಕೆ ಹೊರಬಾರದೇ ಇದ್ದುದನ್ನು ತಿಳಿದು ಮನೆಯ ಕಿಟಕಿಯ ಮೂಲಕ ನೋಡಿದಾಗ ನೇಹಾ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ. ನಂತರ ನೆರೆಹೊರೆಯವರನ್ನು ಕರೆದು ಅವರ ಸಹಾಯದಿಂದ ಕೊಠಡಿ ಬಾಗಿಲು ತೆರೆದು ಒಳ ಪ್ರವೇಶಿಸಿದ್ದು ಸುಳ್ಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದು ನೇಹಾಳ ಮನೆಯವರಿಗೂ ಮಾಹಿತಿ ನೀಡಿದ್ದಾರೆ. ಗುರುವಾರ ನೇಹಾಳ ಪೋಷಕರು ಸುಳ್ಯಕ್ಕೆ ಬಂದು ಆ ಬಳಿಕ ಶವದ ಮರಣೋತ್ತರ ಪರೀಕ್ಷೆ ನಡೆಸಿದ್ದು ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.

ನೇಹಾಳ ಹೆತ್ತವರು ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ. ಈಕೆ ತಂದೆ, ತಾಯಿ ಓರ್ವ ಸಹೋದರಿ, ಓರ್ವ ಸಹೋದರನನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಪ್ರೇಮ ವೈಫಲ್ಯವೇ ಕಾರಣವಿರಬಹುದೆಂದು ಶಂಕಿಸಲಾಗಿದೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News