×
Ad

ಶಬರಿಮಲೆ ತೀರ್ಪು: ಮಹಿಳೆಯರಿಗೆ ಪ್ರವೇಶ ನೀಡುವುದಕ್ಕೆ ಮಹಿಳಾ ನ್ಯಾಯಾಧೀಶೆ ಇಂದು ಮಲ್ಹೋತ್ರ ಒಪ್ಪದಿರಲು ಕಾರಣವೇನು ?

Update: 2018-09-28 18:34 IST

ಹೊಸದಿಲ್ಲಿ,ಸೆ.28 : ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶಾವಕಾಶ ನೀಡಬೇಕೆಂದು ಇಂದು ಸುಪ್ರೀಂ ಕೋರ್ಟಿನ ಪಂಚ ಸದಸ್ಯರ ಪೀಠ ತೀರ್ಪು ನೀಡಿದ್ದರೆ, ಈ ಪೀಠದಲ್ಲಿದ್ದ ಏಕೈಕ ಮಹಿಳಾ ನ್ಯಾಯಾಧೀಶೆ ಜಸ್ಟಿಸ್ ಇಂದು ಮಲ್ಹೋತ್ರ ಮಾತ್ರ ತಮ್ಮ ಸಹ ನ್ಯಾಯಾಧೀಶರ ಜತೆ ಈ ವಿಚಾರದಲ್ಲಿ ಸಹಮತ ಹೊಂದಿಲ್ಲ.

“ದೇಶದ ಜಾತ್ಯತೀತ ವಾತಾವರಣವನ್ನು ಕಾಪಾಡಲು ಆಳವಾದ ಧಾರ್ಮಿಕ ವ್ಯಾಖ್ಯಾನವಿರುವ ಯಾವುದೇ ವಿಚಾರದಲ್ಲಿ ಹಸ್ತಕ್ಷೇಪ ನಡೆಸಬಾರದು,'' ಎಂದು ಜಸ್ಟಿಸ್ ಇಂದು ಮಲ್ಹೋತ್ರ ಅಭಿಪ್ರಾಯಪಟ್ಟಿದ್ದಾರೆ.

“ಧಾರ್ಮಿಕ ಪದ್ಧತಿಗಳು ತಾರತಮ್ಯಕಾರಿ ಎಂದು ಕಂಡು ಬಂದರೂ ನ್ಯಾಯಾಲಯಗಳು ಹಸ್ತಕ್ಷೇಪ ನಡೆಸಬಾರದು, ಧರ್ಮಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ವಿಚಾರವಂತಿಕೆಯ ಅಭಿಪ್ರಾಯಗಳನ್ನು ತರಬಾರದು,'' ಎಂದು ಅವರು ಹೇಳಿದ್ದಾರೆ.

“ಸತಿಯಂತಹ ಕೆಲವೊಂದು ಸಾಮಾಜಿಕ ಪಿಡುಗು ಎಂದು ಹೇಳಬಹುದಾದ ಪದ್ಧತಿಗಳ ಹೊರತಾಗಿ ಇತರ ಯಾವ ಧಾರ್ಮಿಕ ಪದ್ಧತಿಗಳನ್ನು ರದ್ದುಗೊಳಿಸಬೇಕೆಂಬುದನ್ನು ನ್ಯಾಯಾಲಯಗಳು ನಿರ್ಧರಿಸಬಾರದು. ಸಂವಿಧಾನದ 24ನೇ ವಿಧಿಯಲ್ಲಿರುವ ಪೂಜಿಸುವ ಮೂಲಭೂತ ಹಕ್ಕನ್ನು ಸಮಾನತೆಯ ಸಿದ್ಧಾಂತ ಬದಿಗೆ ತಳ್ಳಲು ಸಾಧ್ಯವಿಲ್ಲ,'' ಎಂದು ಜಸ್ಟಿಸ್ ಇಂದು ಮಲ್ಹೋತ್ರ ಅಭಿಪ್ರಾಯ ಪಟ್ಟಿದ್ದಾರೆ.

“ಈ ತೀರ್ಪು ಕೇವಲ ಶಬರಿಮಲೆಗೆ ಸೀಮಿತವಾಗುವುದಿಲ್ಲ ಅದು ಇತರ ಆರಾಧನಾ ಸ್ಥಳಗಳ ಮೇಲೂ ಪರಿಣಾಮ ಬೀರುತ್ತವೆ,'' ಎಂದು ಅವರು ಹೇಳಿದ್ದಾರೆ.

ಜಸ್ಟಿಸ್ ಇಂದು ಮಲ್ಹೋತ್ರ ಅವರ ಅಭಿಪ್ರಾಯದ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹೀಗೆ ಹೇಳಿದ್ದಾರೆ. ``ಜಸ್ಟಿಸ್ ಇಂದು ಮಲ್ಹೋತ್ರ ಅವರ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲವಾದರೂ ಆಕೆಯ ಅಭಿಪ್ರಾಯವನ್ನೂ ಓದಬೇಕಿದೆ. ಆದರೆ ಶಬರಿಮಲೆ ವಿಚಾರದಲ್ಲಿ ಮಹಿಳಾ ನ್ಯಾಯಾಧೀಶೆಯೊಬ್ಬರಿಂದ ಅಸಮ್ಮತಿ ಬಂದಿದೆ ಎಂಬುದು ಬೇಸರ.''

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News